ಚಿಕ್ಕೋಡಿ

ಚಿಕ್ಕೋಡಿ ಕೆಎಲ್‌ಇ ಆಸ್ಪತ್ರೆಯಲ್ಲಿ ರೋಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ

ಚಿಕ್ಕೋಡಿ ಕೆಎಲ್‌ಇ ಆಸ್ಪತ್ರೆಯಲ್ಲಿ ರೋಬೋಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ


       ಚಿಕ್ಕೋಡಿ   12: ಗ್ರಾಮೀಣ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಚಿಕ್ಕೋಡಿಯಲ್ಲಿ ಆರಂಭಿಸಲಾದ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ರೋಬೋಟಿಕ್ ತಂತ್ರಜ್ಞಾನದ ಮೂಲಕ ಮೊಣಕಾಲು ಮರುಜೋಡಣೆ (ರೋಬೋಟಿಕ್ ನೀ ರಿಪ್ಲೇಸ್‌ಮೆಂಟ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

         ಈ ಮೂಲಕ ಮಹಾನಗರಗಳಲ್ಲಿ ಮಾತ್ರ ಲಭ್ಯವಿದ್ದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇದೀಗ ಚಿಕ್ಕೋಡಿಯಲ್ಲಿಯೇ ದೊರೆಯುತ್ತಿರುವುದು ಸ್ಥಳೀಯ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಅನುಕೂಲವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.  

ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಚಿಕ್ಕೋಡಿಯಲ್ಲಿ ಕೆಎಲ್‌ಇ ಆಸ್ಪತ್ರೆಯನ್ನು ಆರಂಭಿಸಲಾಯಿತು.

           ಆರಂಭದಲ್ಲಿ ಗ್ರಾಮೀಣ ಪ್ರದೇಶವಾಗಿದ್ದರಿಂದ ತಜ್ಞ ವೈದ್ಯರ ಲಭ್ಯತೆ ಸವಾಲಾಗಿತ್ತು. ಆದರೆ ಇಂದು ಹಲವು ಪರಿಣತ ವೈದ್ಯರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು ಮತ್ತು ಪುಣೆ ಸೇರಿದಂತೆ ಮಹಾನಗರಗಳಲ್ಲಿ ಹೆಚ್ಚಿನ ವೆಚ್ಚದಲ್ಲಿ ದೊರೆಯುವ ರೋಬೋಟಿಕ್ ಮೊಣಕಾಲು ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಇಲ್ಲಿ ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತಿದೆ.

           ಡಾ. ಮುರುಗೇಶ ಕುರಣೆ ಅವರು ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಎಲ್ಲ ವಿಭಾಗಗಳಲ್ಲಿಯೂ ತಜ್ಞ ವೈದ್ಯರ ಸೇವೆ ಲಭ್ಯವಿರುವುದರಿಂದ ಆಸ್ಪತ್ರೆಯು ಸಾಮಾನ್ಯ ಜನರಿಗೆ ಉತ್ತಮ ಆಸರೆಯಾಗಿದೆ ಎಂದರು.  


ಸುದ್ದಿ ಓದಿ