ಬಿರಡಿ ಗ್ರಾಮದಲ್ಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ: ನಾಡಿನ ಸಂಸ್ಕೃತಿ ಉಳಿಸಲು ವಿವೇಕರಾವ್ ಪಾಟೀಲ್ ಕರೆ
ರಾಯಬಾಗ 12: ಕುಸ್ತಿ ಕೇವಲ ಒಂದು ಕ್ರೀಡೆಯಲ್ಲ, ಅದು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಮತ್ತು ಟಿವಿ ವ್ಯಾಮೋಹಕ್ಕೆ ಒಳಗಾಗುತ್ತಿರುವ ಯುವಜನತೆ ದೈಹಿಕ ಶ್ರಮದ ಕ್ರೀಡೆಗಳಿಂದ ದೂರ ಸರಿಯುತ್ತಿರುವುದು ವಿಷಾದನೀಯ. ಕುಸ್ತಿ ಪಂದ್ಯಾವಳಿಗಳು ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥೈರ್ಯ, ಶಿಸ್ತು ಮತ್ತು ಏಕಾಗ್ರತೆಯನ್ನು ಬೆಳೆಸುತ್ತವೆ ಎಂದು ಕ್ರೀಡಾಭಿಮಾನಿ ಹಾಗೂ ಮಾಜಿ ವಿಪ ಸದಸ್ಯ ವಿವೇಕರಾವ್ ಪಾಟೀಲ ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಬಿರಡಿ ಗ್ರಾಮದಲ್ಲಿ ಮುರುಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ತ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು, ಹಿಂದಿನ ಕಾಲದಲ್ಲಿ ಪ್ರತಿ ಹಳ್ಳಿಯಲ್ಲೂ ಗರಡಿ ಮನೆಗಳು ಸಕ್ರಿಯವಾಗಿದ್ದು, ನೂರಾರು ಪೈಲ್ವಾನರು ನಿತ್ಯ ಅಭ್ಯಾಸ ಮಾಡುತ್ತಿದ್ದರು. ಜಾತ್ರೆ ಮತ್ತು ಉತ್ಸವಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಜಂಗೀ ಕುಸ್ತಿ ಪಂದ್ಯಗಳು ಇಡೀ ಗ್ರಾಮಕ್ಕೆ ಹಬ್ಬದ ವಾತಾವರಣ ತರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಸೂಕ್ತ ಪ್ರೋತ್ಸಾಹ ಮತ್ತು ಆರ್ಥಿಕ ನೆರವಿನ ಕೊರತೆಯಿಂದಾಗಿ ಗ್ರಾಮೀಣ ಭಾಗದ ಗರಡಿ ಮನೆಗಳು ಸೊರಗುತ್ತಿವೆ.
ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು. ವೀರಭದ್ರೇಶ್ವರ ಪಟಿಲೈಸರ್ ಮಾಲೀಕರಾದ ಹಾಗೂ ಯುವ ಮುಖಂಡ ಮಹಾದೇವ ಬೋರಗಾಂವೆ ಮಾತನಾಡಿ, ಮುಂದಿನ ಪೀಳಿಗೆಗೆ ಈ ದೇಶೀಯ ಕ್ರೀಡೆಯನ್ನು ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು, ನಿತ್ಯ ವ್ಯಾಯಾಮ ಹಾಗೂ ಕುಸ್ತಿಯಂತಹ ದೇಸಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಸರ್ಕಾರ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಪೈಲ್ವಾನರಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಂತು ಇನಾಮದಾರ, ಜಯಂತ ಇನಾಮದಾರ, ಶಂಕರ ಶಿರಗಾವೆ, ಈಶ್ವರ ನಿಶಾನದಾರ, ಶಂಕರ ನಿಡವಣಿ, ಶಂಕರ ಗಡಕರಿ, ರಾಜು ಹಿಪ್ಪರಗಿ, ಚಂದ್ರಕಾಂತ ಕರಿಗಾರ, ಪ್ರಕಾಶ ಪಾಟೀಲ, ಶಿವಗೌಡ ನಿಡವಣಿ, ರಾಯಪ್ಪ ನಿಡವಣಿ, ರಾಜು ಕೋಳಿ, ರಾಜು ಮಹಿಶಾಳೆ, ಸದಾ ಭೀರಡಿ, ಮಹಾದೇವ ಭೀರಡಿ, ಮಹಾವೀರ ಚಿಂಚಲಿ, ಸತೀಶ ಆರ್, ಎಚ್ ಎಂ ಮಹೇಶನವರ, ಶರಣಬಸು ಕೆ, ಮಂಜುನಾಥ ಕಳಸಣ್ಣವರ ಸೇರಿದಂತೆ ಅನೇಕರು ಇದ್ದರು.