ಬಳ್ಳಾರಿ

ನ್ಯಾಯಾಲಯದ ಆವರಣದಲ್ಲೇ ವಕೀಲನಿಗೆ ಹಲ್ಲೆ ಯತ್ನ, ರಿವಾಲ್ವರ್ನಿಂದ ಕೊಲೆ ಬೆದರಿಕೆ ಆರೋಪಿ ವಿರುದ್ಧ ಕ್ರಮಕ್ಕೆ ವಕೀಲ ನಾಗೇಂದ್ರ ಪ್ರಸಾದ್ ಪೊಲೀಸ್ ಠಾಣೆಗೆ ದೂರು

ನ್ಯಾಯಾಲಯದ ಆವರಣದಲ್ಲೇ ವಕೀಲನಿಗೆ ಹಲ್ಲೆ ಯತ್ನ, ರಿವಾಲ್ವರ್ನಿಂದ ಕೊಲೆ ಬೆದರಿಕೆ    ಆರೋಪಿ ವಿರುದ್ಧ ಕ್ರಮಕ್ಕೆ ವಕೀಲ ನಾಗೇಂದ್ರ ಪ್ರಸಾದ್ ಪೊಲೀಸ್ ಠಾಣೆಗೆ ದೂರು
Attempted assault on a lawyer within the court premises; death threat issued using a revolver. Lawy

             ಬಳ್ಳಾರಿ, ನ. 13: ನಗರದ ನ್ಯಾಯಾಲಯದ ಆವರಣದಲ್ಲಿಯೇ ವಕೀಲರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ, ಲೈಸೆನ್ಸ್‌ ಹೊಂದಿರುವ ರಿವಾಲ್ವರ್ನಿಂದ ಗುಂಡಿಕ್ಕಿ ಕೊಲ್ಲುವುದಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಸಂಬಂಧ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ರಕ್ಷಣೆ ಒದಗಿಸುವಂತೆ ವಕೀಲ ನಾಗೇಂದ್ರ ಪ್ರಸಾದ್ ಅವರು ಬ್ರೂಸ್ ಪೇಟೆ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  

             ನಗರದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಅ.ಅ.3/2026 ಪ್ರಕರಣದಲ್ಲಿ ಆರೋಪಿ ಅಯ್ಯಪ್ಪ ಪರವಾಗಿ ವಕೀಲ ನಾಗೇಂದ್ರ ಪ್ರಸಾದ್ ಅವರು ವಕಾಲತ್ತು ವಹಿಸಿದ್ದರು. ನ.12ರಂದು ಪ್ರಕರಣದ ವಿಚಾರಣೆಗಾಗಿ ಆರೋಪಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ, ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.15, 2026ಕ್ಕೆ ಮುಂದೂಡಿತ್ತು.  

            ಈ ವೇಳೆ ನ್ಯಾಯಾಲಯದ ಸಭಾಂಗಣದಿಂದ ಹೊರಬರುತ್ತಿದ್ದಾಗ, ಪ್ರಕರಣದ ಫಿರ್ಯಾದಿ ಲಕ್ಷ್ಮರೆಡ್ಡಿ ಅವರು ತಮ್ಮನ್ನು ತಡೆದು, ಪ್ರಕರಣದ ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಿ ವಾಗ್ವಾದ ನಡೆಸಿದ್ದಾರೆ. ಬಳಿಕ ಏಕಾಏಕಿ ಕುತ್ತಿಗೆ ಹಿಡಿಯಲು ಮುಂದಾಗಿ, ಶರ್ಟ್‌ ಕಾಲರ್ ಹಾಗೂ ವಕೀಲರ ಉಡುಪಿನ ಬ್ಯಾಂಡ್ ಹಿಡಿದು ಎಳೆದು ತಳ್ಳಾಡಿದ್ದಾರೆ ಎಂದು ನಾಗೇಂದ್ರ ಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ.  

               ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಹ ವಕೀಲರಾದ ಶ್ರೀನಿಧಿ ಮತ್ತು ಚಂದ್ರಶೇಖರ ರೆಡ್ಡಿ ಅವರು ಮಧ್ಯಪ್ರವೇಶಿಸಿ ತಮ್ಮನ್ನು ರಕ್ಷಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ವಿಚಾರಣೆ ಮುಂದೂಡಲಾಗಿದ್ದು, ಅದರಲ್ಲಿ ತಮ್ಮ ಪಾತ್ರವಿಲ್ಲ ಎಂದು ತಿಳಿಸಿದರೂ ಲಕ್ಷ್ಮರೆಡ್ಡಿ ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.  

                  ಇದಾದ ಸ್ವಲ್ಪ ಸಮಯದ ಬಳಿಕ ಸಹ ವಕೀಲ ಶ್ರೀನಿಧಿ ಅವರೊಂದಿಗೆ ಬಾರ್ ಅಸೋಸಿಯೇಷನ್ಗೆ ತೆರಳುತ್ತಿದ್ದಾಗ, ನ್ಯಾಯಾಲಯದ ನೆಲಮಹಡಿಯ ಮುಖ್ಯ ದ್ವಾರದ ಮೆಟ್ಟಿಲು ಬಳಿ ಮತ್ತೆ ಎದುರಾದ ಲಕ್ಷ್ಮರೆಡ್ಡಿ, ತಾನು ತೆಲಂಗಾಣ ನಕ್ಸಲೈಟ್ನ ಎಂದು  ಹೇಳಿಕೊಂಡು, ತನ್ನ ಬಳಿ ಪರವಾನಗಿ ಹೊಂದಿರುವ ರಿವಾಲ್ವರ್ ಇದೆ, ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

             ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಜೀವಕ್ಕೆ ಅಪಾಯವಿದ್ದು, ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವುದರ ಜೊತೆಗೆ ಲಕ್ಷ್ಮರೆಡ್ಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 115(2), 126(2), 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.  

               ನ್ಯಾಯಾಲಯದ ಆವರಣದಲ್ಲಿಯೇ ವಕೀಲರ ಮೇಲೆ ಹಲ್ಲೆಗೆ ಯತ್ನ ಹಾಗೂ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮ್ ಬ್ರಹ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.   ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವಕೀಲರ ಸಂಘದ ಹಲವಾರು ಜನ ವಕೀಲರು ಇದ್ದರು. 


ಸುದ್ದಿ ಓದಿ