ಬಳ್ಳಾರಿ

ನವೆಂಬರ್ 14: ವಿಶ್ವ ಮಧುಮೇಹ ದಿನ ಹಿ ರೋಗ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅವಶ್ಯ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಲಕನಂದ ಡಿ.ಮಳಗಿ

ನವೆಂಬರ್ 14: ವಿಶ್ವ ಮಧುಮೇಹ ದಿನ ಹಿ ರೋಗ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅವಶ್ಯ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಲಕನಂದ ಡಿ.ಮಳಗಿ
November 14: World Diabetes Day – Awareness and preventive measures regarding the disease are essent


ಬಳ್ಳಾರಿ,ನ.13:  ಪ್ರತಿವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ಮಧುಮೇಹ ಕಾಯಿಲೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಕಾಯಿಲೆಯ ಆರಂಭಿಕ ಪತ್ತೆ, ತಡೆಗಟ್ಟುವಿಕೆ, ಲಕ್ಷಣಗಳು ಹಾಗೂ ನಿಯಂತ್ರಣದ ಮಹತ್ವವನ್ನು ತಿಳಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕನಂದ ಡಿ.ಮಳಗಿ ಅವರು ತಿಳಿಸಿದ್ದಾರೆ. 

1991ರಲ್ಲಿ ಅಂತರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ವಿಶ್ವ ಮಧುಮೇಹ ದಿನವನ್ನು ಆರಂಭಿಸಿದವು. ಇನ್ಸುಲಿನ್ ಕಂಡುಹಿಡಿಯುವಲ್ಲಿ ಮಹತ್ವದ ಕೊಡುಗೆ ನೀಡಿದ ವಿಜ್ಞಾನಿ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ಅಂಗವಾಗಿ ನವೆಂಬರ್ 14 ಅನ್ನು ಈ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. 

*ಮಧುಮೇಹ ಎಂದರೇನು ಮತ್ತು ಇದರ ವಿಧಗಳು?* 

ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುವುದರಿಂದ ಅಥವಾ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ರಕ್ತದಲ್ಲಿ ಗ್ಲೂಕೋಸ್ (ಸಕ್ಕರೆ) ಪ್ರಮಾಣ ಹೆಚ್ಚಾಗುವ ಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ. 

ಟೈಪ್‌-1 ಮಧುಮೇಹ: ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಬಹಳ ಕಡಿಮೆಯಾಗುವುದು ಅಥವಾ ನಿಲ್ಲುವುದು. 

ಟೈಪ್‌-2 ಮಧುಮೇಹ: ದೇಹವು ಇನ್ಸುಲಿನ್ ಅನ್ನು ಸಮರ​‍್ಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು (ಇದು ಸಾಮಾನ್ಯವಾಗಿ ಕಂಡುಬರುವ ವಿಧವಾಗಿದೆ). 

ಗರ್ಭಾವಸ್ಥೆಯ ಮಧುಮೇಹ: ಗರ್ಭಾವಸ್ಥೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸ್ಥಿತಿ. 

*ಪ್ರಮುಖ ಲಕ್ಷಣಗಳು:* 

ಪದೇಪದೇ ಮೂತ್ರ ವಿಸರ್ಜನೆ ಮತ್ತು ಅತಿಯಾದ ಬಾಯಾರಿಕೆ. 

ಅತಿಯಾದ ಹಸಿವು ಮತ್ತು ದೇಹದ ತೂಕ ಕಡಿಮೆಯಾಗುವುದು. 

ಸುಸ್ತು ಮತ್ತು ನಿಶ್ಯಕ್ತಿ, ದೃಷ್ಟಿ ಮಂಜಾಗುವುದು. 

ಗಾಯಗಳು ನಿಧಾನವಾಗಿ ಗುಣವಾಗುವುದು ಮತ್ತು ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ. 

ಕೆಲವರಿಗೆ ಯಾವುದೇ ಲಕ್ಷಣಗಳಿಲ್ಲದೆಯೂ ಮಧುಮೇಹ ಇರಬಹುದು, ಹಾಗಾಗಿ ನಿಯಮಿತ ತಪಾಸಣೆ ಅಗತ್ಯ. 

*ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು:* 

ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಡೆದಾಟ ಅಥವಾ ವ್ಯಾಯಾಮ ಮಾಡುವುದು. ಸಕ್ಕರೆ ಮತ್ತು ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು. ತರಕಾರಿ, ಸೊಪ್ಪು, ಸಿರಿಧಾನ್ಯ ಹಾಗೂ ನಾರಿನಾಂಶವಿರುವ ಆಹಾರ ಸೇವಿಸುವುದು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹಾಗೂ ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳುವುದು. 

ಆರೋಗ್ಯ ಇಲಾಖೆಯು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಆರೋಗ್ಯ ಕೇಂದ್ರಗಳಲ್ಲಿ ರಕ್ತದ ಸಕ್ಕರೆ ಪರೀಕ್ಷೆ, ಆರೋಗ್ಯ ಶಿಕ್ಷಣ ಮತ್ತು ಕರಪತ್ರ ಹಂಚಿಕೆ, ಜಾಥಾ ಹಾಗೂ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುತ್ತಿದೆ. ‘ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿ ಹಿ ಆರೋಗ್ಯವಂತ ಸಮಾಜ ನಿರ್ಮಿಸಿ’ ಎಂಬ ಸಂದೇಶದೊಂದಿಗೆ ಈ ಬಾರಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕನಂದ ಡಿ.ಮಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ