ಮಹಲಿಂಗಪುರ

ಮಹಾಲಿಂಗಪುರ ಪುರಸಭೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ

ಮಹಾಲಿಂಗಪುರ ಪುರಸಭೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ
Celebration of the birth anniversary of the heroic woman Onake Obavva at the Mahalingapura Municipal

ಲೋಕದರ್ಶನ ವರದಿ 

          ಮಹಾಲಿಂಗಪುರ 12: ನಾಡಿನ ಇತಿಹಾಸದಲ್ಲಿ ವೀರವನಿತೆ ಒನಕೆ ಓಬವ್ವಳ ಹೆಸರು ಧೈರ್ಯ, ಸಾಹಸ ಮತ್ತು ದೇಶಪ್ರೇಮದ ಪ್ರತೀಕವಾಗಿ ಅಚ್ಚಳಿಯದೆ ಉಳಿದಿದೆ. ಶತ್ರುಗಳ ದಾಳಿಯಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಲು ತನ್ನ ಪ್ರಾಣದ ಹಂಗು ತೊರೆದು ಒನಕೆಯನ್ನೇ ಆಯುಧ ವನ್ನಾಗಿಸಿಕೊಂಡು ಹೋರಾಡಿದ ಆಕೆಯ ಶೌರ್ಯಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಪುರಸಭೆಯ ಎಸ್‌.ಎನ್‌. ಪಾಟೀಲ ಹೇಳಿದರು. 

          ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಒನಕೆ ಓಬವ್ವ ಕೇವಲ ಒಬ್ಬ ಮಹಿಳೆಯಲ್ಲ, ಆಕೆ ಧೈರ್ಯ, ಸಾಹಸ, ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನದ ಪ್ರತಿರೂಪವಾಗಿದ್ದಾರೆ.

              ಚಿತ್ರದುರ್ಗದ ಕೋಟೆಯ ಮೇಲೆ ಶತ್ರು ಸೈನಿಕರು ದಾಳಿ ನಡೆಸಿದ ಸಂದರ್ಭದಲ್ಲಿ ಸಾಮಾನ್ಯ ಗೃಹಿಣಿಯಾಗಿದ್ದ ಓಬವ್ವ ತನ್ನ ಸಮಯಪ್ರಜ್ಞೆ ಮತ್ತು ಅಪ್ರತಿಮ ಸಾಹಸದಿಂದ ಶತ್ರುಗಳನ್ನು ಎದುರಿಸಿ ಕೋಟೆಯನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ತ್ಯಾಗ ಮತ್ತು ಹೋರಾಟದ ಮನೋಭಾವ ಕನ್ನಡ ನಾಡಿನ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿದೆ ಎಂದರು. 

            ಇಂದಿನ ಯುವಜನತೆ ಹಾಗೂ ಮಹಿಳೆಯರು ಒನಕೆ ಓಬವ್ವಳ ಜೀವನಗಾಥೆಯನ್ನು ತಿಳಿದುಕೊಳ್ಳಬೇಕು. ಯಾವುದೇ ಸವಾಲು ಎದುರಾದರೂ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿರುವ ಪ್ರತಿಭೆ ಹಾಗೂ ನಾಯಕತ್ವದ ಗುಣಗಳನ್ನು ಗುರುತಿಸಬೇಕು. ಇಂತಹ ಮಹನೀಯರ ಜಯಂತಿ ಆಚರಣೆಗಳು ಕೇವಲ ಸಾಂಪ್ರದಾಯಿಕ ಕಾರ್ಯಕ್ರಮಗಳಾಗದೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದು ಹೇಳಿದರು. 

             ಕಾರ್ಯಕ್ರಮದಲ್ಲಿ ಪುರಸಭೆಯ ಸಿಬ್ಬಂದಿಗಳಾದ ಪರಶುರಾಮ ನಾಗನೂರ, ಎಂ.ಎಂ. ಮುಗಳಖೋಡ, ಬಿದಾನಂದ ಮರಕಟ್ಟಿ, ಸುನೀಲ ಬಬಲೇಶ್ವರ, ರಾಜು ಹುಗಾರ, ಪರಸು ಬಂಡಿವಡ್ಡರ, ರಾಮು ಮಾಂಗ, ಮೋದಿನ ಮುಲ್ಲಾ, ಎಂ.ಡಿ.ಮಹಾಲಿಂಗ, ಕಾಂತು ಹಡಪದ, ಮಹಾಲಿಂಗ ಮಾಂಗ, ಈರಣ್ಣ ಕೊಪ್ಪದ, ಲಕ್ಷ್ಮೀ ಪರಿಟ, ಸೇರಿದಂತೆ ಪುರಸಭೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ