ಇದು ಪುಣೇರಿ ಮಿಸಳ, ಅಬ್ಬಾ!!! ಅದರ ರುಚಿಯನ್ನು ಉಂಡವನೇ ಬಲ್ಲ!
ಮಿಸಳ ನಮೂನೆಗಳಲ್ಲಿ ಹಲವು. ಕೊಲ್ಲಾಪುರಿ ಮಿಸಳ,ಇಚಲಕರಂಜಿ ಮಿಸಳ,ಸಾಂಗಲಿ ಮಿಸಳ- ಹೀಗೆ ತರಾವರಿ ಊರುಗಳ ಶಹರುಗಳ ಹೆಸರಲ್ಲಿ ಪ್ರಸಿದ್ಧವು.ಅದರಲ್ಲಿ ನಮ್ಮ ಸಂಕೇಶ್ವರದ ರೇಣುಕಾ ಹೊಟೆಲ್ ಮಿಸಳ ಮಸ್ತ ಮಸ್ತ!
ಚಿಕ್ಕವರಿದ್ದಾಗ ಹೊಟೆಲ್ ಗೆ ಹೋಗುವುದು, ತಿನ್ನುವುದು ಅಂದರೆ ಅಪರಾಧ ತರಹ ಭಾವಿಸುವ ಧೋರಣೆಯಿತ್ತು. ನಮ್ಮೂರಿನ ಜನತಾ ಹೊಟೆಲ್ ಮಿಸಳ ಚಟಕದಾರ ಆಗಿತ್ತು. ಚಟಕದಾರ ಅಂದರೆ ನಾಲಿಗೆ ಕಡಕ್ ರುಚಿಯ ಮೂಲಕ ಚುರುಗುಡುವಂತಿರುವಂಥದ್ದು. ಅದು ಅಸ್ಸಲ್ ಜವಾರಿ ಮಿಸಳ.
ಆ ಮಿಸಳದಲ್ಲಿ ಪಾಪಡಿ,ಸೇವು,ಚಿವಡಾ,ಭಡಂಗ,ಚಕ್ಕಲಿ ಚೂರು,ತುಸು ಉಪ್ಪಿಟ್ಟು- ಹೀಗೆ ಮಿಕ್ಸ್ ಖಾರದ ಜಿನ್ನಸುಗಳು ವ್ಯಂಜನಗಳು. ಅದರ ಮೇಲೆ ತಾಜಾ ಕೊತ್ತಂಬರಿ ಸೊಪ್ಪು, ಹೆಚ್ಚ ತುಣುಕು ಮಾಡಿದ ಈರುಳ್ಳಿ ಹಾಕಿ ವಿಶಿಷ್ಟ ಮಸಾಲೆಯುಕ್ತ ಬಿಸಿಯಾದ ಸಾರು ಸುರುವಿದರೆ- ಅಬ್ಬಾ!!! ಅದರ ರುಚಿಯನ್ನು ಉಂಡವನೇ ಬಲ್ಲ!
ಮಿಸಳ ಪದ ಮರಾಠಿಯ ಮಿಸಳಣೆ ಕ್ರಿಯಾಪದದಿಂದ ಉತ್ಪತ್ತಿಗೊಂಡುದು. ಮಿಸಳಣೆ=ಕೂಡಿಸುವುದು.ಬೆರೆಸುವುದು ಇತ್ಯಾದಿ ಸಮಾನಾರ್ಥಕ ಪದಗಳು.ಇಂಗ್ಲೀಷ್ ನ ಮಿಕ್ಸ್ ನ ಸಂವಾದಿಯಾದ ಪದ.
ಇಲ್ಲಿ ಪ್ರಸ್ತಾಪಿಲಿರುವ ಇಚಲಕರಂಜಿ ಶಹರು ಮಹಾರಾಷ್ಟ್ರ ದ ಮೆಂಚೆಸ್ಟರ್ ಎಂದೇ ಕರೆಯಿಸಿಕೊಳ್ಳುವ ನೇಕಾರಿಕೆ ಉದ್ಯಮದ ನಗರ. ಇಲ್ಲಿ ಯಾರಿಗಾದರೂ ಹೊಟ್ಟೆ ತುಂಬ ಅನ್ನ ನೀಡುವ ಉದ್ಯೋಗಗಳು ಹೇರಳವಾಗಿದ್ದವು.(ಈಗಲೂ ಇರಬಹುದು.)
ಕರ್ನಾಟಕದ ಗಡಿ ಮತ್ತು ನೇಕಾರಿಕೆಗೆ ಹೆಸರಾದ ರಬಕವಿ,ಬನಹಟ್ಟಿ,ಗುಳೇದಗುಡ್ಡ ಮತ್ತಿತರ ಪ್ರದೇಶಗಳ ಕಾರ್ಮಿಕರು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಂಡುಕೊಂಡವರು. ಹಾಗೆ ಕನ್ನಡಿಗರ ಸಂಖ್ಯೆ ಅಧಿಕವಾಗಿ ಇರುವುದರಿಂದಲೇ ಏಣಗಿ ಬಾಳಪ್ಪನವರ ಕಂಪನಿ ನಾಟಕಗಳು ತುಂಬಿದ ಗೃಹದಲ್ಲಿ ಪ್ರಯೋಗಗೊಳ್ಳುತ್ತಿದ್ದವು.
ನೂಲಿನ ಗಿರಣಿ ಮತ್ತು ಸಕ್ಕರೆ ಕಾರ್ಖಾನೆಗಳೂ ಇರುವುದರಿಂದ ಆಯಾ ಕಾರ್ಮಿಕರ ಬ್ರಹತ್ ವಲಯ ಸೃಷ್ಟಿಯಾಗಿತ್ತು. ಆ ಕಾರ್ಮಿಕರ ದಂಡು ಇಲ್ಲಿ ಮಾಮೂಲು.ಇಂತಹ ವಿಭಿನ್ನ ಉದ್ಯೋಗಗಳ ಕಾರ್ಮಿಕರ ಆಪತ್ಕಾಲದಲ್ಲಿಯ ಆಹಾರವೆಂದರೆ,ಮಿಸಳ ಬ್ರೆಡ್,ವಡಾ ಪಾವ,ಮಿರ್ಚಿ ಭಜಿ ಮತ್ತು ಬನ್- ಇವು ಅವರ ಹಸಿವನ್ನು ತಣಿಸುವ ಕಡಿಮೆ ದರದಲ್ಲಿ ದೊರೆಯುವ ಆಹಾರ ಪದಾರ್ಥಗಳು.
ಇದರಲ್ಲಿನ ಪೌಷ್ಟಿಕಾಂಶ ಬಗ್ಗೆ ಕೇಳಲು ಹೋಗಬೇಡಿರಿ.
*
ಚಿಕ್ಕವನಿದ್ದಾಗ ನನ್ನ ಹುಟ್ಟೂರಿಂದ ಇಚಲಕರಂಜಿಗೆ ಬಹಳಷ್ಟು ಮಂದಿ ಬಟ್ಟೆ ,ನೂಲು ,ಸಕ್ಕರೆ ಕಾರಖಾನೆ, ಗಿರಣಿಗಳಿಗೆ ದುಡಿಯಲು ಹೋಗುವವರು ಬಹುಸಂಖ್ಯಾತರಾಗಿದ್ದರು. ಕೆಲವರು ಅಲ್ಲಿಯೆ ವಾಸವಾಗಿದ್ದು, ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದರು.ಇನ್ನು ಕೆಲವರು ನಿತ್ಯ ೨೦ ರಿಂದ ೨೫ ಕಿಮೀ ಸೈಕಲ್ ತುಳಿದು ಇಚಲಕರಂಜಿಗೆ ಹೋಗಿ ಬರುತ್ತಿದ್ದ ಗಟ್ಟಿ ಘಟ ಉಳ್ಳವರೂ ಇದ್ದರು.
*
ನಮ್ಮೂರಿನ ಒಬ್ಬಾತ ದಿನಾಲು ಅಲ್ಲಿ ಕೆಲಸ ಮಾಡುವವರ ಊಟದ ಡಬ್ಬಿಗಳನ್ನು ಅವರವರ ಮನೆಗಳಿಂದ ಪಡೆದು ಸೈಕಲ್ ಮೇಲೆ ಕ್ಯಾರಿಯರ್ ಗೆ ಹಾಕಿ ಹೊತ್ತು ಅಲ್ಲಿ ಎಲ್ಲೆಲ್ಲಿ ಕೆಲಸಕ್ಕಿದ್ದಾರೋ ಅಲ್ಲಲ್ಲಿ ಅವರ ವಿಳಾಸಕ್ಕೆ ತಲುಪಿಸಿ; ಹಿಂದಿನ ದಿನದ ಖಾಲಿ ಊಟದ ಡಬ್ಬಿಗಳನ್ನು ಪಡೆದು ವಾಪಸ್ ಬೇಡಕಿಹಾಳಕ್ಕೆ ವಾಪಸಾಗುತ್ತಿದ್ದ.
ಹಾಗೆ ಆತ ನಿತ್ಯ ೬೦ ಕಿಮಿ ಕ್ಕೂ ಹೆಚ್ಚು ಪೈಡಲ್ ತುಳಿಯುತ್ತಿದ್ದ.
ಅಷ್ಟೇ ಯಾಕೆ ನನ್ನ ಅಣ್ಣ ಸತ್ಯಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸಕ್ಕಿದ್ದ. ಆತ ಹೀಗೆ ದಿನಂಪ್ರತಿ ಊಟದ ಡಬ್ಬಿ ಒಯ್ಯುವ ಡಬಾವಾಲಾ ತರಹ ದಿನಾಲು ಬೆಳಗಿನ ಜಾವ ಐದಕ್ಕೆ ಊರು ಬಿಟ್ಟು ೨೫ ಕಿಮಿ ಸೈಕಲ್ ತುಳಿದು,ಕೆಲಸ ಮಾಡಿ ಸಂಜೆ ಕೆಲಸದ ನಂತರ ಅವತ್ತೇ ೨೫ ಕಿಮಿ ಸೈಕಲ್ ತುಳಿದು ವಾಪಸು ಊರಿಗೆ ಬಂದು ಊಟ ಮಾಡಿ ಮಲಗುತ್ತಿದ್ದ. ಮತ್ತೆ ಬೆಳಿಗ್ಗೆದ್ದು ಹೊರಡುತ್ತಿದ್ದ. ಈಗಲೂ ಗಟ್ಟಿಮುಟ್ಟಾಗಿರುವ ನನ್ನ ಅಣ್ಣ ಸತ್ಯಪ್ಪ ಹರೆಯದವರ ತರಹ ಕಾಣುತ್ತಾನೆ. ಯಾವ ರೋಗ ರುಜಿನಗಳು ಅವನ ಬಳಿ ಸುಳಿದಿಲ್ಲ.
*
ಕಾಲೇಜಿನಲ್ಲಿದ್ದಾಗ ನಾನು ನಡುನಡುವೆ ಬಸ್ ನಲ್ಲಿ ಯಾವುದೋ ಕಾರ್ಯ ನಿಮಿತ್ತ ಇಚಲಕರಂಜಿಗೆ ಹೋಗುತ್ತಿದ್ದೆ. ಆಗ ಅಲ್ಲೊಂದು ಕರಿಹಂಚಿನ ಮನೆಯ ಹೊಟೆಲ್ “ಮಧುರ”ವೆಂಬುದಿತ್ತು.ಈಗ ಅದು ಒಂದು ಐಶಾರಾಮಿ ನವೀಣ ಕಟ್ಟದಲ್ಲಿದೆ. ಅಲ್ಲಿ ಮಿಸಳ ಬಿಟ್ಟರೆ ಬೇರೆ ತಿನಿಸುಗಳು ದೊರೆಯುತ್ತಿರಲಿಲ್ಲ. ಆ ಮಿಸಳ ಮಾತ್ರ ತುಂಬಾ ರುಚಿಕರವಾಗಿತ್ತು.ಇದೆ. ಅಲ್ಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರೂ,ಎಲ್ಲ ವ್ಯಾಪಾರಿಗಳೂ ಮಿಸಳ ಸವಿಯಲು ಆಗಮಿಸುತ್ತಿದ್ದರು. ಅಲ್ಲಿ ಬಾಡಿ ಬಿಲ್ಡರ್ ಗಳ ಬಗೆ ಬಗೆ ಶೈಲಿಯ ಚಿತ್ರಗಳನ್ನು ಗೋಡೆಗೆ ಆಣಿಸಿ ತೂಗು ಹಾಕಿರುತ್ತಿದ್ದರು.
ಅಲ್ಲಿ ಮಿಸಳ ಸೇವಿಸುವವನಿಗೆ-
“ನಾವೂ ಒಮ್ಮೆ ಈ ಮಿಸಳ ತಿಂದು ಹೀಗೆಯೆ ಬಾಡಿ ಬಿಲ್ಡರ್ ತರಹ ಆಗತೀವಿ”… ಅಂತನಿಸಿದ್ದೂ ಇದೆ.
*
ನಾಲ್ಕೈದು ದಶಕಗಳ ಹಿಂದೆ-
ಇಡ್ಲಿ, ವಡೆ, ದೋಸೆ, ಉತ್ತಪ್ಪಗಳು ಕಾಲಿಡದ ಕಾಲಘಟ್ಟದಲ್ಲಿ ಇಲ್ಲಿನ ಬಡ ಕೂಲಿಯ,ಕಾರ್ಮಿಕನ ಆದ್ಯ ಆಹಾರ ಮಿಸಳ, ವಡಾಪಾವ, ಬನ್ ಮಿರ್ಚಿ ಭಜಿ ಆಗಿರುತ್ತಿತ್ತು. ಅದರಲ್ಲಿ ಮನುಷ್ಯನಿಗೆ ಆರೋಗ್ಯ ಕ್ಕೆ ಪೂರಕವಾದ ಪೌಷ್ಟಿಕಾಂಶಗಳ ಲೆಕ್ಕ ಹಾಕುವ ಪ್ರಜ್ಞೆಯು ಎಲ್ಲಿ, ಯಾರಿಗಿತ್ತು?!
ಡಾ.ಡಿಎಸ್.ಚೌಗಲೆ