ಸರ್ಕಾರ ಕೂಡಲೇ ‘ಬಸವ ಮಂಟಪ’ ಕೃತಿಯನ್ನು ನಿಷೇಧಿಸಿ, ಕೃತಿಕಾರ ‘ರವಿ ಹಂಜ್’ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ; ಯುವ ಲೇಖಕ ಮಂಜುನಾಥ.ಎಸ್.ಕಟ್ಟಿಮನಿ
ವಿಜಯಪುರ 21 : ಸ್ವಯಂ ಘೋಷಿತ ಲೇಖಕ ರವಿ ಹಂಜ್ ಅವರ ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಸರ್ಕಾರ ಕೂಡಲೇ ನಿಷೇಧಿಸಿ, ಕೃತಿಕಾರ ‘ರವಿ ಹಂಜ್’ ಅವರ ವಿರುದ್ಧ ಶೀಘ್ರವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ಯುವ ಲೇಖಕ ಮಂಜುನಾಥ.ಎಸ್.ಕಟ್ಟಿಮನಿ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನುಭವ ಮಂಟಪ ಎಂಬ ಅತ್ಯದ್ಭುತ ಸಂಸತ್ತನ್ನು ಪರಿಚಯಿಸುವ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸಿದ ಸಮಾನತೆಯ ಹರಿಕಾರ, ಮಹಾಮಾನವತಾವಾದಿ ಆಗಿರುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಬಸವ ಮಂಟಪ ಕೃತಿಯಲ್ಲಿ ಕೊಲೆಗಡುಕ, ಸುಳ್ಳುಗಾರ, ಮೋಸಗಾರ ಎಂದು ಚಿತ್ರಿಸಲಾಗಿದೆ. ಹೀಗಾಗಿ ರವಿ ಹಂಜ್ ಅವರನ್ನು ಓರ್ವ ಅಕ್ಷರ ವ್ಯಭಿಚಾರಿ ಎಂದು ಕರೆಯಲು ಯಾವುದೇ ಅಡ್ಡಿಯಿಲ್ಲ ಎಂದು ಕಡುನುಡಿಗಳಿಂದ ತೀವ್ರವಾಗಿ ಖಂಡಿಸಿದ್ದಾರೆ.
ಬಸವಣ್ಣ ಕನ್ನಡದ ಹಾಗೂ ಕನ್ನಡ ನಾಡಿನ ಅಸ್ಮಿತೆ, ಈ ಕೃತಿ ಅಸಂಖ್ಯ ಬಸವಾಭಿಮಾನಿಗಳ ಹಾಗೂ ಬಸವಾನುಯಾಯಿಗಳ ಸ್ವಾಭಿಮಾನದ ಮೇಲಿನ ನೇರ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಕ್ಷಮ್ಯ ಅಪರಾಧಕ್ಕಾಗಿ ಲೇಖಕರು ಬಸವ ಅಭಿಮಾನಿಗಳಿಗೆ ಕ್ಷಮೆ ಯಾಚಿಸಬೇಕು. ಏಕೆಂದರೆ ಇದು ನಾಡಿನ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಒಂದು ವೇಳೆ ಈ ವಿಷಯದಲ್ಲಿ ಸರ್ಕಾರ ಮೌನವಾದರೆ ಒಂದರ್ಥದಲ್ಲಿ ಮಹಾಪುರುಷರ ವಿರುದ್ಧದ ಇಂತಹ ಕೃತಿಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ. ಬಸವ ವಿಚಾರಗಳ ರಕ್ಷಣೆಗಾಗಿ ಬಸವಾಭಿಮಾನಿಗಳಾದ ನಾವು ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲೇಖಕರು ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಸ್ವತಂತ್ರರಾಗಿದ್ದಾರೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರು ಬೇಕಾದರೂ ಯಾರಿಗೆ ಬೇಕಾದರೂ ಏನೂ ಬೇಕಾದರೂ ಹೇಳಬಹುದೇ? ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಸವಣ್ಣನವರನ್ನು ಇಡೀ ನಾಡು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿದರೆ ಅಖಂಡ ವಿಜಯಪುರ ಜಿಲ್ಲೆಯ ಜನರ ಪಾಲಿಗೆ ಬಸವಣ್ಣ ಅಘೋಷಿತ ದೇವರು. ಏಕೆಂದರೆ ಇಲ್ಲಿನ ಜನರ ಧಮನಿ-ಧಮನಿಗಳಲ್ಲಿ ಬಸವಣ್ಣನಿದ್ದಾನೆ. ಇಂತಹ ಧೀಮಂತ ವ್ಯಕ್ತಿತ್ವದ ಬಸವಣ್ಣನವರನ್ನು ಟೀಕಿಸಿ,
ಬೈಯ್ದು ತಾವು ದೊಡ್ಡವರಾಗುತ್ತೇವೆ ಎಂದು ಭ್ರಮಿಸುವುದು ದೊಡ್ಡ ತಪ್ಪು. ಇಂತಹವರಿಂದ ಬಸವಣ್ಣನ ವ್ಯಕ್ತಿತ್ವಕ್ಕೆ ಗುಲಗಂಜಿಯಷ್ಟೂ ಧಕ್ಕೆಯಾಗಲಾರದು. ಬಸವ ಭಕ್ತರ ಹೃದಯದಲ್ಲಿ ಬಸವಣ್ಣನವರ ಬಗ್ಗೆ ಅಭಿಮಾನ, ಪ್ರೀತಿ, ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ಹೊರತು ಕಡಿಮೆಯಾಗುವುದಿಲ್ಲ.
ಪ್ರಜ್ಞಾವಂತರೆನಿಸಿಕೊಂಡವರು ಆಡುವ ಮಾತು, ಬರೆಯುವ ಪ್ರತಿಯೊಂದು ಅಕ್ಷರದ ಪರಿಣಾಮ ಏನಾಗುತ್ತದೆ, ದುಷ್ಟಪರಿಣಾಮ ಏನಾಗುತ್ತದೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಹೀಗೆ ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.