ವಿಜಯಪುರ

ಲಕ್ಷ್ಮಣ ನಿಂಬರಗಿ ಅವರಿಗೆ ಎಕ್ಸಲಂಟ್ ಸಂಸ್ಥೆ ವತಿಯಿಂದ ಸನ್ಮಾನ

ಲಕ್ಷ್ಮಣ ನಿಂಬರಗಿ ಅವರಿಗೆ ಎಕ್ಸಲಂಟ್ ಸಂಸ್ಥೆ ವತಿಯಿಂದ ಸನ್ಮಾನ

            ವಿಜಯಪುರ 21:   ತವರು ಜಿಲ್ಲೆಯಲ್ಲಿ ಸೇವೆ ಮಾಡುವುದೇ ಪುಣ್ಯದ ಕೆಲಸ ಅಂತದರಲ್ಲಿ ವಿಜಯಪುರದ ಬೆನಕನಹಳ್ಳಿಯಂತ ಕುಗ್ರಾಮದಲ್ಲಿ ಜನಿಸಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ವಿಜಯಪುರ ಜಿಲ್ಲೆಯ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಕಳ್ಳ ಕಾಕರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ ಲಕ್ಷ್ಮಣ ನಿಂಬರಗಿ ಅವರ ಕುರಿತು ಈ ಜಿಲ್ಲೆಯ ಪ್ರತಿಯೊಬ್ಬರಿಗೂ ಹೆಮ್ಮೆ ಇದೆ. ಅವರು ತವರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಸ್ಫೂರ್ತಿ ಚಿಲುಮೆಯಾಗಿದ್ದಾರೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು. 

              ಇಲ್ಲಿಯವರೆಗೂ ಅತ್ಯುತ್ತಮ ಸೇವೆ ಸಲ್ಲಿಸಿ ವಿಜಯಪುರ ಜನಗಳಿಗೆ ನೆಮ್ಮದಿಯಿಂದ ಓಡಾಡುವುದಕ್ಕೆ ಕಾರಣರಾಗಿದ್ದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ವರ್ಗಾವಣೆಯಾದ ಪ್ರಯುಕ್ತ ಎಕ್ಸಲಂಟ್ ಶಿಕ್ಷಣ ಸಂಸ್ಥೆವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ ಅವರು; ಇಂದಿನ ಯುವಕರಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ ಹೊಂದಿದ ಲಕ್ಷ್ಮಣ ನಿಂಬರಗಿ ಅವರ ಸೇವೆಯಿಂದ ನಮಗೆಲ್ಲ ಹರ್ಷವಾಗಿದೆ. ಇನ್ನೊಂದಿಷ್ಟು ದಿನಗಳ ಕಾಲ ಅವರ ಸೇವೆ ನಮ್ಮ ಜಿಲ್ಲೆಗೆ ದೊರಕಿದ್ದರೆ ಇನ್ನೂ ಸಂತೋಷವಾಗುತ್ತಿತ್ತು.

            ಅವರ ಕಾರ್ಯ ವೈಖರಿಯನ್ನು ಇಡೀ ಜಿಲ್ಲೆ ಕಣ್ಣಾರೆ ಕಂಡಿದೆ. ಅದರಲ್ಲೂ ಕಳ್ಳರ ಹಾವಳಿ ಇಡೀ ಜಿಲ್ಲೆಯನ್ನು ಆವರಿಸಿದ ಸಂದರ್ಭದಲ್ಲಿ ಅವರು ತೋರಿದ ಕಾರ್ಯಕ್ಷಮತೆಯೂ ಎಲ್ಲರ ಶ್ಲಾಘನೆಗೆ ಕಾರಣವಾಗಿತ್ತು. ಆಡಳಿತದಲ್ಲಿ ಸುಧಾರಣೆ ತರುವುದಕ್ಕಾಗಿ ಅವರು ಮಾಡಿದ ಕಾರ್ಯ ಅನುಪಮವಾದುದು. ಅದರಲ್ಲೂ ಸಂಚಾರ ದಟ್ಟಣೆಯಿಂದಾಗಿ ಆಗುತ್ತಿದ್ದ ಸಮಸ್ಯೆಯನ್ನು ಸರಿಪಡಿಸಲು ಅವರು ಕೈಗೊಂಡ ಕಾರ್ಯವನ್ನು ಇಂದಿಗೂ ಜನಗಳು ಸ್ಮರಿಸುತ್ತಾರೆ.

           ಎಐ ಆಧಾರಿತ ಕ್ಯಾಮರಾಗಳ ಅವಳಡಿಕೆ ಮಾಡುವುದರ ಮುಖಾಂತರ ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಮಾಡಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳ ಮೇಲೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಜೊತೆಗೆ ಅವರ ಶೈಕ್ಷಣಿಕ ಸಾಧನೆಗಳು ನಮ್ಮ ಮಕ್ಕಳ ಮೇಲೆಯೂ ಗಣನೀಯವಾದ ಪರೀಣಾಮ ಬೀರಿದೆ.

           ಹಲವಾರು ಕಾರ್ಯಕ್ರಮಗಳಲ್ಲಿ ಅವರು ಮಕ್ಕಳ ಮಾರ್ಗದರ್ಶಕರಾಗಿದ್ದು ಇಂದಿಗೂ ಮಕ್ಕಳೂ ಸಹ ಅವರಂತೆ ಆಗಬೇಕು ಎನ್ನುವ ಕನಸು ಕಾಣುತ್ತಿರುವುದು ಇದಕ್ಕೆ ಉತ್ತಮ ನಿದರ್ಶನವಾಗಿದೆ.  ಇಂದು ಅವರು ವರ್ಗವಾಗಿ ರಾಜಧಾನಿಗೆ ತೆರಳುತ್ತಿರುವುದು ಒಂದೆಡೆ ಬೇಸರವೆನಿಸಿದರು ಕರ್ತವ್ಯದ ಕರೆಗೆ ಸ್ಪಂಧಿಸುವ ಅನಿವಾರ್ಯತೆ ಇದ್ದೇ ಇರುತ್ತದೆ. ಹೀಗಾಗಿ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.  


ಸುದ್ದಿ ಓದಿ