ಟಿಪ್ಪು ಸುಲ್ತಾನ ಅವರಿಂದ ಹಿಂದೂ ದೇವಸ್ಥಾನಗಳಿಗೆ ಅಪಾರ ಕೊಡುಗೆ : ಕಾಂಗ್ರೇಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್
ಲೋಕದರ್ಶನ ವರದಿ
ವಿಜಯಪುರ : ಅಪ್ಪಟ ದೇಶಪ್ರೇಮಿಯಾಗಿದ್ದ ಟಿಪ್ಪು ಸುಲ್ತಾನ್ ಅವರು ದೇಶಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದು, ಟಿಪ್ಪು ಸುಲ್ತಾನ್ ಅವರು ರಾಷ್ಟ್ರಕ್ಕಾಗಿ ಚಿರಸ್ಮರಣೀಯ ಸೇವೆ ಮಾಡಿದ್ದಾರೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಹೇಳಿದರು.
ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಶುಕ್ರವಾರ ಝುಮ ಝುಮ ಅಸೋಶೀಯೇಶನ್, ಕರ್ನಾಟಕ ವತಿಯಿಂದ ಆಯೋಜಿಸಲಾದ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಧರ್ಮ ಸಹಿಷ್ಣುತೆ ಹೊಂದಿದ್ದ ಟಿಪ್ಪು ಸುಲ್ತಾನ ಅವರು ಎಲ್ಲ ಧರ್ಮಗಳನ್ನು ಸಮನಾಗಿ ಕಾಣುತ್ತಿದ್ದರು. ಹಿಂದೂ ದೇವಸ್ಥಾನಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ಕೂಡ ಅವರ ದಾರಿಯಲ್ಲಿ ಸಾಗಿದಾಗ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗುತ್ತದೆ ಎಂದರು.
ಸರ್ವ ಜನಾಂಗದ ಶಾಂತಿಯ ತೋಟವಾದ ನಮ್ಮ ಕನ್ನಡ ನಾಡಿನಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತರೆನ್ನದೇ ಎಲ್ಲರೂ ಒಂದೇ, ನಾವು ಭಾರತೀಯರು ಎಂಬ ಭಾವನೆಯಿಂದ ಒಟ್ಟಾಗಿ ಬಾಳಬೇಕು ಎಂದರು.
ಇದಕ್ಕೂ ಮೊದಲು ನಗರದ ಆದಿಲ್ ಶಾಹಿ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಕಾಂಗ್ರೇಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರ ನೇತೃತ್ವದಲ್ಲಿ ಯುವಕರೊಂದಿಗೆ “ನಶಾಮುಕ್ತ ನಗರ” ಎಂಬ ಸಂಕಲ್ಪದೊಂದಿಗೆ ಪಾದಯಾತ್ರೆ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಬಾಲಕಿಯರಿಬ್ಬರು ಕಿರು ಭಾಷಣ ಮಾಡಿ ಟಿಪ್ಪು ಸುಲ್ತಾನ್ ಬಾಲ್ಯ ಹಾಗೂ ಬ್ರಿಟಿಷರ ಜೊತೆಗಿನ ಹೋರಾಟವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯೂಸುಫ್ ಜಮಾದಾರ, ಫಯಾಜ ಕಲಾದಗಿ ಅಬ್ದುಲ್ ರಜಾಕ್ ಹೊರ್ತಿ, ಆನಂದ ಓಧಿ, ಮತೀನ ಕುಮಾರ ದೇವದಾರ್, ಆಶಾ ತಳಕೇರಿ, ಮಲ್ಲಮ್ಮ, ಅನ್ವರ್ ಮಕಾನದಾರ, ಮಹಾದೇವ ರಾವೂಜಿ ಸೇರಿದಂತೆ ಅನೇಕರು ಹಾಗೂ ಸಾರ್ವಜನಿಕರು ಇದ್ದರು.