ಕಾಗವಾಡ

ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಸಮಸ್ಯೆ ಪರಿಹರಿಸಿಕೊಳ್ಳಿ: ತಹಶೀಲ್ದಾರ ರವೀಂದ್ರ ಹಾದಿಮನಿ.

ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಸಮಸ್ಯೆ ಪರಿಹರಿಸಿಕೊಳ್ಳಿ: ತಹಶೀಲ್ದಾರ ರವೀಂದ್ರ ಹಾದಿಮನಿ.

 ಕಾಗವಾಡ 24: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವೆ ಆಂದೋಲವನ್ನು ಜಾರಿಗೆ ತಂದಿದ್ದು, ಪ್ರಜಾಸೇವೆ ಆಂದೋಲನದಲ್ಲಿ ಗ್ರಾಮಸ್ಥರು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ತಹಶೀಲ್ದಾರ ರವೀಂದ್ರ ಹಾದಿಮನಿ ತಿಳಿಸಿದ್ದಾರೆ.  

ಅವರು ಶನಿವಾರ ದಿ. 24 ರಂದು ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆದ ಪ್ರಜಾಸೇವೆ ಆಂದೋಲವನ್ನು ಸಸಿಗೆ ನೀರೇರೆದು ಚಾಲನೆ ನೀಡಿ, ಮಾತನಾಡುತ್ತಿದ್ದರು. ಜನರ ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರಜಾಸೇವೆಯನ್ನು ಪ್ರಾರಂಭಿಸಿದ್ದು, ಜನರು ಮೌಖಿಕವಾಗಿ ತಮ್ಮ ಸಮಸ್ಯೆಗಳನ್ನು ಮಂಡಿಸದೇ, ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಇಲ್ಲಿ ಸಲ್ಲಿಕೆಯಾದ ಸಮಸ್ಯೆಗಳೆಷ್ಟು ಎಂದು ತಿಳಿದುಕೊಂಡು, ಪರಿಹಾರ ನೀಡುವಲ್ಲಿ ಅನಕೂಲವಾಗಲಿದೆ ಎಂದರು.  

ಶಿರಗುಪ್ಪಿ ಗ್ರಾಮಸ್ಥರು ರಸ್ತೆ ಅತಿಕ್ರಮಣ, ಪ್ರೌಢಶಾಲಾ ಶಿಕ್ಷಕರ ಸಮಸ್ಯೆ, ಘನತಾಜ್ಯ ವೀಲೇವಾರಿ ಘಟಕ, ರೈತರ ಪಂಪಸೆಟ್‌ಗಳಿಗೆ ವಾರದ 7 ದಿನ ನಿರಂತರ ವಿದ್ಯುತ್, ಬಿಸಿಎಂ ಹಾಸ್ಟೆಲ್ ಸಮಸ್ಯೆ, ಇ-ಸ್ವತ್ತು, ಕುಡಿಯುವ ನೀರು, ಶಿರಗುಪ್ಪಿಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸುವ ಕುರಿತು ಮತ್ತು  ಜೆಜೆಎಂ ಕಾಮಗಾರಿಯಿಂದಾಗಿ ಉಂಟಾದ ರಸ್ತೆ ರೀಪೇರಿ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ತೋಡಿಕೊಂಡು, ಅಧಿಕಾರಿಗಳಿಂದ ಪರಿಹಾರ ಮತ್ತು ಮಾಹಿತಿ ಪಡೆದುಕೊಂಡರು. 

ಈ ಸಮಯದಲ್ಲಿ ತಹಶೀಲ್ದಾರ ರವೀಂದ್ರ ಹಾದಿಮನಿ, ತಾ.ಪಂ. ಇಓ ವೀರಣ್ಣಾ ವಾಲಿ, ಗ್ರೆಡ್‌-2 ತಹಶೀಲ್ದಾರ ರಷ್ಮಿ ಜಕಾತಿ, ಸಿಡಿಪಿಓ ಸಂಜೀವಕುಮಾರ್ ಸದಲಗಿ, ಬಿಇಓ ಕಚೇರಿಯ ಬಿಆರ್‌ಸಿ ಪಾಂಡುರಂಗ ಮದಭಾವಿ, ಹೆಸ್ಕಾಂ ಎಇಇ ಎ.ಎಸ್‌. ಮಾಕಣಿ, ಪಿಎಸ್‌ಐ ರಾಘವೇಂದ್ರ ಖೋತ, ಕೃಷಿ ಅಧಿಕಾರಿ ನಿಂಗನಗೌಡಾ ಬಿರಾದರ, ಪಿಡಬ್ಲ್ಯೂಡಿ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ, ಜೆಜೆಎಂನ ರವೀಂದ್ರ ಮುರಗಾಲಿ, ತೋಟಗಾರಿಕೆ ಇಲಾಖೆಯ ರೇಖಾ ಹಳ್ಳೂರ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ತಾ.ಪಂ. ಎಡಿಇಆರ್ ಅಲ್ಲಾವುದ್ದಿನ್ ಅನ್ಸಾರಿ, ಪಿಡಿಓ ಶಿಲ್ಪಾ ನಾಯಿಕವಾಡಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಎಲ್ಲ ಇಲಾಖೆಯ ಅಧಿಕಾರಿಗಳು, ಶಿರಗುಪ್ಪಿ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ