ಬಳ್ಳಾರಿ

ಅಯೋಡಿನ್ಯುಕ್ತ ಉಪ್ಪಿನ ಬಳಕೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಡಾ. ರಾಮಕೃಷ್ಣ

ಅಯೋಡಿನ್ಯುಕ್ತ ಉಪ್ಪಿನ ಬಳಕೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಡಾ. ರಾಮಕೃಷ್ಣ

ಬಳ್ಳಾರಿ .24:   ಅಯೋಡಿನ್ ಕೊರತೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಯೋಡಿನ್ಯುಕ್ತ ಉಪ್ಪಿನ ಬಳಕೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು  ರುಕ್ಮಿಣಮ್ಮ ಚಂಗಾರೆಡ್ಡಿ ಸ್ಮಾರಕ ಸರಕಾರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ ಬಳ್ಳಾರಿ ಹಾಗೂ ರುಕ್ಮಿಣಮ್ಮ ಚಂಗಾರೆಡ್ಡಿ ಸ್ಮಾರಕ ಸರಕಾರಿ ವಾಣಿಜ್ಯ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಅಯೋಡಿನ್ ಕೊರತೆಯ ನ್ಯೂನತೆ ನಿಯಂತ್ರಣ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ. ವಿಶಾಲಾಕ್ಷಿ ಅವರು ಉಪನ್ಯಾಸದಲ್ಲಿ ಮಾತನಾಡಿ, ದೇಹದ ಥೈರಾಯ್ಡ್‌ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸಲು ಹಾಗೂ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನ್ ಉತ್ಪಾದಿಸಲು ಅಯೋಡಿನ್ ಅತ್ಯಗತ್ಯ. ಇದರ ಕೊರತೆಯಿಂದ ಗಳಗಂಡ (ಗಾಯಿಟರ್), ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವುದು ಹಾಗೂ ಗರ್ಭಿಣಿಯರಲ್ಲಿ ಗರ್ಭಪಾತದಂತಹ ಅಪಾಯಗಳು ಎದುರಾಗಬಹುದು. ಆದ್ದರಿಂದ ಪ್ರತಿದಿನ ಅಯೋಡಿನ್ಯುಕ್ತ ಉಪ್ಪನ್ನೇ ಬಳಸಬೇಕು ಮತ್ತು ಅದನ್ನು ತೇವಾಂಶವಿಲ್ಲದ, ಮುಚ್ಚಿದ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು ಎಂದು ಅವರು ವಿವರಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ಮಾತನಾಡಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನೀರೀಕ್ಷಕ ಗೋವಿಂದಪ್ಪ, ಎನ್ಟಿಸಿಪಿ ಸಲಹೆಗಾರ ಪ್ರಶಾಂತ್, ಎನ್‌ಎಸ್‌ಎಸ್ ಸಂಯೋಜಕ ಡಾ. ಅಲಕರ್ ರಾಚಪ್ಪ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಡಾ. ಡಿ. ಸುಧಾಕರ್, ಪ್ರಿಯದರ್ಶಿನಿ ಠಾಕೂರ್, ಸಿದ್ದನಗೌಡ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕರಪತ್ರಗಳನ್ನು ವಿತರಿಸಲಾಯಿತು 


ಸುದ್ದಿ ಓದಿ