ದೇವರಗುಡ್ಡ ಬನ್ನಿ ಉತ್ಸವದಲ್ಲಿ ಒಂದು ಸಾವು, ಹಲವಾರು ಮಂದಿಗೆ ಗಾಯ
ಬಳ್ಳಾರಿ. ಅ. 22 : (ದೇವರಗುಡ್ಡ) ನೆರೆಯ ಆಂಧ್ರ್ರದೇಶದ ಕರ್ನೂಲು ಜಿಲ್ಲೆಯ ಹೊಳಗುಂದಿ ಮಂಡಲದ ದೇವರಗುಡ್ಡದಲ್ಲಿ ಗುರುವಾರ ಮುಂಜಾನೆ ಶ್ರೀ ಮಾಳ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಬನ್ನಿ ಉತ್ಸವದ ವೇಳೆ ಸಂಭವಿಸಿದ ಕೋಲಿನಿಂದ ಬಡಿದಾಡುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವಾರು ಜನ ಗಾಯಗೊಂಡ ಘಟನೆ ನಡೆದಿದೆ.
ಮಧ್ಯರಾತ್ರಿಯ ನಂತರ ಶ್ರೀ ಮಾಳ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಬೆಟ್ಟದಿಂದ ಕೆಳಗಿಳಿಸಿ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ನೆರನಿಕಿ, ನೆರನಿಕಿ ತಾಂಡಾ ಮತ್ತು ಕೊತ್ತಪೇಟೆ ಆಲೂರು, ಅರಿಕೆರೆ, ಎಲ್ಲಾರ್ಥಿ ಸೇರಿದಂತೆ ನೆರೆಯ ಗ್ರಾಮಗಳ ಜನರು ಕೋಲುಗಳನ್ನು ಹಿಡಿದು ಎದುರಾದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆರಂಭವಾದ ಕಾಳಗವು ತೀವ್ರ ಸಂಘರ್ಷಕ್ಕೆ ತಿರುಗಿದ್ದು ಈ ಘಟನೆಯಲ್ಲಿ ಮಹಿಳೆಯರು, ಯುವಕರು ಹಾಗೂ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.ಘರ್ಷಣೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಆಲೂರು ನಿವಾಸಿ, 28 ವರ್ಷದ ಪೋತುರಾಜು ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಉತ್ಸವಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಅವರಲ್ಲಿ ಸುಮಾರು 30 ಸಾವಿರ ಮಂದಿ ನೇರವಾಗಿ ಘರ್ಷಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಕರ್ನೂಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಸುಮಾರು ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ, ಸುಮಾರು ಎರಡು ಗಂಟೆಗಳ ಕಾಲ ನಡೆದ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಿದ ಬಳಿಕವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಯಿತು.ಇದೇ ವೇಳೆ, ಶ್ರೀ ಮಾಳ ಮಲ್ಲೇಶ್ವರ ತಾತನ ಕಾರ್ಣಿಕದ ನುಡಿಯೂ ಭಕ್ತರಲ್ಲಿ ಕುತೂಹಲ ಮೂಡಿಸಿದೆ.
“ಮಲ್ಲಿಗೆ ಹೂವ ನಿಂದ, ಗಂಗೆ ಮಾಳೆ ನಿಂತಿಳ ಎಚ್ಚರ, 7900 ನಗ ಹಳ್ಳಿ, 3400 ಒಕ್ಕಳ ಜೋಳ, 3661 ಆದಿತು” ಎಂಬ ನುಡಿಯ ಅರ್ಥದ ಕುರಿತು ಭಕ್ತರು ಚರ್ಚಿಸುತ್ತಿದ್ದಾರೆ. ನುಡಿಯಲ್ಲಿನ ಪದಗಳ ನಿಖರ ಅರ್ಥವನ್ನು ದೃಢಪಡಿಸದೆ ನಿರ್ದಿಷ್ಟ ಭವಿಷ್ಯವಾಣಿ ಎಂದು ವ್ಯಾಖ್ಯಾನಿಸುವುದು ಸೂಕ್ತವಲ್ಲ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.