ಬಳ್ಳಾರಿ ಬೆಟ್ಟದ ಹೊಂಡದಲ್ಲಿ ದುರಂತ: ತಂದೆ, ಮಗ ಸಾವು
ಬಳ್ಳಾರಿ. ಅ. 21 : ಏಷ್ಯಾದ ಎರಡನೇ ಅತಿ ದೊಡ್ಡ ಬೆಟ್ಟವಾದ ಬಳ್ಳಾರಿಯ ಇತಿಹಾಸ ಪ್ರಸಿದ್ಧ ಏಕಶಿಲಾ ಬೆಟ್ಟ ವೀಕ್ಷಣೆಗೆ ತೆರಳಿದ್ದ ತಂದೆ ಮತ್ತು ಮಗನನ್ನು ಬೆಟ್ಟದಲ್ಲಿನ ಹೊಂಡ ಬಲಿ ಪಡೆದ ಘಟನೆ ನಡೆದಿದೆ. ಹೊಂಡದಲ್ಲಿನ ಮೀನುಗಳನ್ನು ಕುತೂಹಲದಿಂದ ನೋಡಲು ಹತ್ತಿರಕ್ಕೆ ತೆರಳಿದ್ದ ಬಾಲಕ ಪಾಚುಗಟ್ಟಿದ್ದರಿಂದ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾನೆ, ಅಲ್ಲೇ ಇದ್ದ ತಂದೆ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ನೀರಿಗೆ ಇಳಿದಿದ್ದಾನೆ ಇಬ್ಬರಿಗೂ ಈಜು ಬಾರದೆ ಇರುವುದರಿಂದ ಮತ್ತು ಪಾಚಿ ಕಟ್ಟಿದ ಹೊಂಡದಲ್ಲಿ ಕಾಲು ಜಾರಿ ಮೇಲೆ ಬರಲಾಗದೆ ತಂದೆ-ಮಗ ಇಬ್ಬರೂ ದುರಂತದಲ್ಲಿ ಸಾವಿಗೆ ಈಡಾಗಿದ್ದಾರೆ.
ಆಯುಧ ಪೂಜೆ ಹಬ್ಬದ ರಜೆ ಹಿನ್ನೆಲೆಯಲ್ಲಿ ಮೂರು ಕುಟುಂಬಗಳು ಒಟ್ಟಾಗಿ ಬಳ್ಳಾರಿ ಬೆಟ್ಟ ವೀಕ್ಷಣೆಗೆ ತೆರಳಿದ್ದವು. ಈ ವೇಳೆ ಬೆಟ್ಟದ ಹಿಂಭಾಗದಲ್ಲಿರುವ ಹೊಂಡದಲ್ಲಿ ಮೀನುಗಳನ್ನು ನೋಡಲು ತೆರಳಿದ ಬಾಲಕ ಹೊನ್ನೂರಸ್ವಾಮಿ (10)ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ.ಕಣ್ಣೆದುರೇ ಮಗ ನೀರಿನಲ್ಲಿ ಮುಳುಗುವುದನ್ನು ಕಂಡ ತಂದೆ ರಮೇಶ್, ಆತನನ್ನು ಉಳಿಸುವ ಆತುರದಲ್ಲಿ ಹೊಂಡಕ್ಕೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್ ತಂದೆ-ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರು ಮೂಲತಃ ಆಂಧ್ರ್ರದೇಶದ ಕಣೇಕಲ್ ಪ್ರದೇಶದವರಾಗಿದ್ದು, ಬಟ್ಟೆ ಒಗೆಯುವ ವೃತ್ತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೌಲ್ ಬಜಾರ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.