ಅನಂತಪೂರ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಹೋರಾಟ..
ಕಾಗವಾಡ 24: ಮತಕ್ಷೇತ್ರದ ಅನಂತಪೂರ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಅವರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ ಬೆಂಬಲ ಸೂಚಿಸಿ, ಶುಕ್ರವಾರ ದಿ. 23 ರಂದು ಗ್ರಾಮಸ್ಥರನ್ನು ಭೇಟ್ಟಿ ಮಾಡಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಶನಿವಾರ ದಿ. 24 ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟ್ಟಿ ಮಾಡಿದ ಶ್ರೀಮಂತ ಪಾಟೀಲ ಈ ವಿಷಯವನ್ನು ಸಚಿವರ ಗಮನಕ್ಕೆ ತಂದು ನೀರು ಹರಿಸುವ ಕುರಿತು ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಸ್ಪಂದಿಸಿದ ಸತೀಶ ಜಾರಕಿಹೊಳಿ ಅವರು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಆದಷ್ಟು ಬೇಗ ಅನಂತಪೂರ ಗ್ರಾಮದ ಕೆರೆ ತುಂಬಿಸಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಮಯದಲ್ಲಿ ಮುಖಂಡ ಅಪ್ಪಾಸಾಬ ಅವತಾಡೆ ಉಪಸ್ಥಿತರಿದ್ದರು.