ದಲಿತ ಸಮುದಾಯದ ನಿವೃತ್ತ ಶಿಕ್ಷಕನ ಮೇಲೆ ಹಲ್ಲೆ ಆರೋಪ: ಆರೋಪಿಗಳ ಬಂಧನಕ್ಕೆ ಆಗ್ರಹ
ಯರಗಟ್ಟಿ 24: ದಲಿತ ಸಮುದಾಯಕ್ಕೆ ಸೇರಿದ ನಿವೃತ್ತ ಶಿಕ್ಷಕ ಹಣಮಂತ ತಮ್ಮಣ್ಣಾ ಭಂಜತ್ರಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.ಯರಗಟ್ಟಿ ಪಟ್ಟಣದ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಹಣಮಂತ ತಮ್ಮಣ್ಣಾ ಭಂಜತ್ರಿ ಅವರ ಮೇಲೆ ಬೈಲಹೊಂಗಲ ನಿವಾಸಿ ಬಾಬು ಬಸಪ್ಪ ಕುಡಸೋಮಣ್ಣವರ ಹಾಗೂ ಅವರ ಸಹಚರರು ಹೊಲ ಬಿಟ್ಟು ಕೊಡುವಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.ತಮ್ಮ ಸೇವಾವಧಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅವರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ನಿವೃತ್ತ ಶಿಕ್ಷಕರ ಮೇಲೆಯೇ ಹಲ್ಲೆ ನಡೆದಿರುವ ಆರೋಪ ಆತಂಕಕ್ಕೆ ಕಾರಣವಾಗಿದೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.ಘಟನೆಯ ಕುರಿತು ಬೈಲಹೊಂಗಲ ಪೊಲೀಸರು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಹಲ್ಲೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಬೇಕು. ಜಾತಿ ಆಧಾರಿತ ದೌರ್ಜನ್ಯ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.ನಿವೃತ್ತ ಶಿಕ್ಷಕರಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜೊತೆಗೆ, ಪ್ರಕರಣದ ತನಿಖೆಯನ್ನು ವಿಳಂಬ ಮಾಡದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಕುಟುಂಬಸ್ಥರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.24 ಯರಗಟ್ಟಿ 01ಪೋಟೋ ಶೇಷಿಕೆ