ಅ.26ರಂದು ಬೆಟಗೇರಿ ಗ್ರಾಮದಲ್ಲಿ ಸಡಗರದಿಂದ ಶೀಗಿ ಹುಣ್ಣಿಮೆ ಆಚರಣೆ
ಬೆಟಗೇರಿ 24: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಡಗರದಿಂದ ಶೀಗಿಹುಣ್ಣಿಮೆಯನ್ನು ಸೋಮವಾರ ಅ.26ರಂದು ಸ್ಥಳೀಯ ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ (ಹೊಲ ಹೊಗುವದು) ಕಾರ್ಯಕ್ರಮ ನಡೆಯಲಿದೆ ಎಂದು ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ ತಿಳಿಸಿದ್ದಾರೆ.
ಚರಗ ಚೆಲ್ಲುವ ಕಾರ್ಯಕ್ರಮ: ಇಲ್ಲಿಯ ರೈತ ಕುಟುಂಬದ ಮಕ್ಕಳು ಸೇರಿದಂತೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು, ಕೆಲವರು ಕಾಲ್ನಡೆಗೆಯಲ್ಲಿ, ಇನ್ನೂ ಕೆಲವರು ದ್ವಿಚಕ್ರ ವಾಹನಗಳಲ್ಲಿ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಿ, ಹೊಲ-ಗದ್ದೆಗಳಲ್ಲಿ ಮನೆಯಿಂದ ಒಯ್ದ ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕದಾದ(ಪಂಚ ಪಾಂಡವರು)ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ಹೊಲ-ಗದ್ದೆಯ ತುಂಬೆಲ್ಲಾ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆಯನ್ನು ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಮರ ಬಳಿಕ ಮನೆಮಂದಿ ಹಾಗೂ ಅಕ್ಕ-ಪಕ್ಕದ ಮನೆಯವರು ಸೇರಿಕೊಂಡು ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಲಿದ್ದಾರೆ ಎಂದು ಸ್ಥಳೀಯ ಹಿರಿಯ ನಾಗರಿಕರು ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯ ಎಮ್.ಐ.ನೀಲಣ್ಣವರ, ಬಸವರಾಜ ಪಣದಿ, ಮಾಯಪ್ಪ ಬಾಣಸಿ, ರಾಮಣ್ಣ ಬಳಿಗಾರ ಸೇರಿದಂತೆ ಹಿರಿಯ ನಾಗರಿಕರು, ಮತ್ತೀತರರು ಇದ್ದರು.