ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿಗೆ ಮಾಜಿ ಸಚಿವ ಶ್ರೀಮಂತ ಪಾಟೀಲ ಆಗ್ರಹ
ಕಾಗವಾಡ 17: ಹಿಪ್ಪರಗಿ ಬ್ಯಾರೇಜ್ನ ಗೇಟ್ನಲ್ಲಿ ಮತ್ತೇ ಸೋರಿಕೆಯಾಗುತ್ತಿದ್ದು, ನದಿಯಲ್ಲಿ ಸಂಗ್ರಹಿಸಿಟ್ಟಿರುವ ನೀರು ಗೇಟ್ಗಳ ಮೂಲಕ ಹರಿದು ಹೋಗುತ್ತಿದೆ. ಮಳೆಯ ಕೊರತೆಯಿಂದಾಗಿ ಜನರು ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ, ನೀರಿನ ಸೋರಿಕೆಯಿಂದಾಗಿ ಸಂಗ್ರಹಿತ ನೀರು ವ್ಯರ್ಥವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಕೂಡಲೇ ಇದನ್ನು ದುರಸ್ಥಿ ಮಾಡಬೇಕೆಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮುಖಾಂತರ ಮಾಜಿ ಸಚಿವ ಶ್ರೀಮಂತ ಪಾಟೀಲ ಆಗ್ರಹಿಸಿದ್ದಾರೆ.
ಶನಿವಾರ ದಿ. 17 ರಂದು ತಮ್ಮನ್ನು ಭೇಟ್ಟಿ ಮಾಡಿದ ರೈತರು ಈ ವಿಷಯವನ್ನು ಅವರ ಗಮನಕ್ಕೆ ತಂದಾಗ ಶ್ರೀಮಂತ ಪಾಟೀಲ ಅವರು ನೀರಾವರಿ ಇಲಾಖೆಯ ಎಂಡಿಯವರೊಂದಿಗೆ ಫೋನ್ ಮುಖಾಂತರ ಮಾತನಾಡಿ, ಹಿಪ್ಪರಗಿ ಬ್ಯಾರೇಜ್ನ ಸೋರಿಕೆಯಾಗುತ್ತಿರುವ ಗೇಟ್ಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸಿ, ಸಂಗ್ರಹಿಸಿಟ್ಟಿರುವ ನೀರನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಳೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ನೀರಿನ ಸೋರಿಕೆಯನ್ನು ತಡೆದು ಅಮೂಲ್ಯವಾದ ನೀರನ್ನು ಸಂರಕ್ಷಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.