ಬಳ್ಳಾರಿ

ಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿ

ಬಳ್ಳಾರಿ ಜಿಲ್ಲೆಯಾದ್ಯಂತ ನ. 25 ರಂದು ಬೃಹತ್ ರಕ್ತದಾನ ಶಿಬಿರ: 5,000 ಯೂನಿಟ್ ಸಂಗ್ರಹ ಗುರಿ

            ಬಳ್ಳಾರಿ 23: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಇದೇ ನವೆಂಬರ್ 25 ರಂದು ಬಳ್ಳಾರಿ ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಒಟ್ಟು 5,000 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಆರ್‌. ಮಳಗಿ ಅವರು ತಿಳಿಸಿದರು. 

ರಕ್ತದಾನ ಶಿಬಿರ ಆಯೋಜನೆ ಕುರಿತು ನಗರದ ಡಿಹೆಚ್‌ಓ ಸಭಾಂಗಣದಲ್ಲಿ ಸೋಮವಾರ ಏರಿ​‍್ಡಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಲ್ಲಾ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದರು. 

ಖಾಸಗಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕರಲ್ಲಿ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳಲ್ಲಿ ಜಾಗೃತಿ ಮೂಡಿಸಬೇಕು. ಶಿಬಿರಕ್ಕೆ ಅಗತ್ಯ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು, ಸಿಬ್ಬಂದಿ ನಿಯೋಜನೆ ಹಾಗೂ ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು. 

ಆಯ್ದ ತಂಡಗಳ ಮೂಲಕ ಪ್ರತಿ ತಂಡಕ್ಕೆ ತಲಾ 250 ರಕ್ತದ ಯೂನಿಟ್ ಸಂಗ್ರಹಿಸುವ ಗುರಿ ನೀಡಲಾಗಿದೆ.  ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯ ನಗರ ಪ್ರದೇಶದ ವಾರ್ಡ್‌ ಗಳು ಮತ್ತು ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. 

ರಕ್ತದಾನ ಮಾಡಲು ಇಚ್ಛಿಸುವವರು ಇ-ರಕ್ತಕೋಶ ಆಪ್ಮೂಲಕ ನೋಂದಣಿ ಮಾಡಿಕೊಂಡು ರಕ್ತದಾನ ಮಾಡಬಹುದಾಗಿದೆ. ಜನಪ್ರತಿನಿಧಿಗಳು ಮತ್ತು ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನಿಯೋಜಿತ ಸಿಬ್ಬಂದಿ ಕ್ರಿಯಾಯೋಜನೆ ರೂಪಿಸಿಕೊಂಡು ನಿಗದಿತ ಸಮಯಕ್ಕೆ ಸಮವಸ್ತ್ರ ಮತ್ತು ಪರಿಕರಗಳೊಂದಿಗೆ ಹಾಜರಿದ್ದು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು. 

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ಅವರು ಮಾತನಾಡಿ, ವಾಹನ ವ್ಯವಸ್ಥೆ ಹಾಗೂ ಓಷಧಿಗಳ ದಾಸ್ತಾನು ಇಟ್ಟುಕೊಳ್ಳುವಂತೆ ಮತ್ತು ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು ಶಿಬಿರಗಳ ಮೇಲ್ವಿಚಾರಣೆ ನಡೆಸುವಂತೆ ತಿಳಿಸಿದರು. 

*ಶಿಬಿರ ನಡೆಯುವ ಸ್ಥಳಗಳು:* 

ಬಳ್ಳಾರಿ: ಹೊಸ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಕೃಷಿ ಮಾರುಕಟ್ಟೆ, ಜಿಲ್ಲಾ ಆಸ್ಪತ್ರೆ, ಬಿಐಟಿಎಂ ಕಾಲೇಜು, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಿಎಂಸಿಆರ್‌ಸಿ, ಕೌಲ್‌ಬಜಾರ್, ಗಾಂಧಿನಗರ ಸುವರ್ಣ ಇಂಟರ್ ನ್ಯಾಷನಲ್ ಶಾಲೆ, ಕೆಪಿಟಿಸಿಎಲ್‌. 

ಸಿರುಗುಪ್ಪ: ಕಿಷ್ಕಂದಾ ವಿಶ್ವವಿದ್ಯಾಲಯ, ಬಸ್ ನಿಲ್ದಾಣ ಸಿರುಗುಪ್ಪ. 

ಸಂಡೂರು : ಎನ್ ಎಮ್ ಡಿ ಸಿ, ಶ್ರೀ ಕುಮಾರಸ್ವಾಮಿ ದೇವಸ್ಥಾನ, ತೋರಣಗಲ್ಲು ಸಂಜೀವಿನಿ ಆಸ್ಪತ್ರೆ. 

ಕುರುಗೋಡು:  ಈಶ್ವರ್ ಪಾರ್ಕ್‌ ಹತ್ತಿರ ಹಳೆ ಬಸ್‌ನಿಲ್ದಾಣ. 

ಕಂಪ್ಲಿ: ಪ್ರಾಥಮಿಕ ಆರೋಗ್ಯ ಕೇಂದ್ರ ಎಮ್ಮಿಗನೂರು. 

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್‌. ಬಸರೆಡ್ಡಿ, ಜಿಲ್ಲಾ ಆರ್‌.ಸಿ.ಹೆಚ್ ಅಧಿಕಾರಿ ಡಾ. ವೀರಕುಮಾರ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ. ವೀರೇಂದ್ರ ಕುಮಾರ, ಡಾ.ಮಂಜುಳ, ಆರ್‌.ಎಂ.ಒ ಡಾ. ಮಲ್ಲಿಕಾರ್ಜುನ ಸೇರಿದಂತೆ ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ರಕ್ತ ಭಂಡಾರಗಳ ಅಧಿಕಾರಿಗಳು, ಬಿಎಂಸಿಆರ್‌ಸಿ, ಜಿಲ್ಲಾ ಆಸ್ಪತ್ರೆ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆರೋಗ್ಯ ಶಿಕ್ಷಣ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ