ಮೂಲ ಹಕ್ಕಿಪಿಕ್ಕಿ ಸೇರಿದಂತೆ ಆದಿವಾಸಿ ಜಾತಿಗಳನ್ನು ನಿಗಮಕ್ಕೆ ಸೇರಿಸಲು ಸರ್ಕಾರಕ್ಕೆ ಒತ್ತಾಯಿಸುವೆ : ಅನ್ನಪ್ಪ ಚವ್ಹಾಣ
ಲೋಕದರ್ಶನ ವರದಿ
ಕಂಪ್ಲಿ 23: ಪಾರ್ಧಿ, ಹರಣಿಶಿಕಾರಿ, ಹಕ್ಕಿಪಿಕ್ಕಿ ಸೇರಿದಂತೆ ಮೂಲ ಆದಿವಾಸಿಯ ಆರೇಳು ಜಾತಿಗಳನ್ನು ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪಾರ್ಧಿ ಹರಣಶಿಕಾರಿ ವಿಮುಕ್ತ ಬುಡಕಟ್ಟು ಹಿತರಕ್ಷಣಾ ಸಮಿತಿಯ ಅನ್ನಪ್ಪ ಚವ್ಹಾಣ ಹೇಳಿದರು.
ಪಟ್ಟಣದ 12ನೇ ವಾರ್ಡಿನ ತುಳಜಾ ಭವಾನಿ ದೇವಸ್ಥಾನದ ಶಿಕಾರಿ ಕಾಲೋನಿಗೆ ಭಾನುವಾರ ಕರ್ನಾಟಕ ರಾಜ್ಯ ಪಾರ್ಧಿ ಹರಣ ಶಿಕಾರಿ ವಿಮುಕ್ತ ಬುಡಕಟ್ಟು ಹಿತರಕ್ಷಣಾಸಮಿತಿ ಮತ್ತು ಧಾರವಾಡ ಜಿಲ್ಲಾ ಆದಿವಾಸಿ ಪಾರ್ಧಿ ಕ್ಷೇಮಾಭಿವೃದ್ಧಿ ಸಂಘದ ತಂಡದವರು ಭೇಟಿ ನೀಡಿ, ಇಲ್ಲಿನ ಹಕ್ಕಿಪಿಕ್ಕಿ ಜನರ ಕುಂದು ಕೊರತೆಗಳನ್ನು ಆಲಿಸಿದ ನಂತರ ಮಾತನಾಡಿ,
ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಶಿಕಾರಿ ಕಾಲೋನಿಗೆ ಮೊದಲ ಭೇಟಿ ನೀಡಿ, ಸಮುದಾಯದ ಸಮಸ್ಯೆಗಳನ್ನು ಆಲಿಸಿದ್ದು, ಮುಂದಿನ ದಿನದಲ್ಲಿ ಸಮಸ್ಯೆಗಳನ್ನು ಮುಕ್ತಿ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು. ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂವಿಧಾನಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಂತರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು ಮಾತನಾಡಿ, ಬದುಕು ಸಾಗಿಸಲೆಂದು ಬೇರೆ ಬೇರೆ ವಿದೇಶಿಗಳಲ್ಲಿ ಹಕ್ಕಿಪಿಕ್ಕಿ ಕುಟುಂಬಗಳು ಹೋಗಿದ್ದಾರೆ. ಆದರೆ, ಉಗಾಂಡದ ಕಾಂಗೋದಲ್ಲಿ ರಾಜ್ಯದ ಶಿವಮೊಗ್ಗದ 70 ಜನ ಮತ್ತು ದಾವಣಗೆರೆಯ 25 ಜನ ಸೇರಿದಂತೆ ಒಟ್ಟು 95 ಜನ ಹಕ್ಕಿಪಿಕ್ಕಿಯವರನ್ನು ಬಂಧಿಸಲಾಗಿದೆ.
ಕೂಡಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಕೇಂದ್ರ ಸರ್ಕಾರ ಬಂಧಕ್ಕೊಳಗಾದ ಹಕ್ಕಿಪಿಕ್ಕಿಗಳನ್ನು ಬಿಡುಗಡೆ ಮಾಡಿಸಿ, ಸ್ವದೇಶಕ್ಕೆ ಕರೆತರಬೇಕು. ಆದಿವಾಸಿ ನಿಗಮದಲ್ಲಿ ಕೆಲ ಮೂಲ ಅದಿವಾಸಿ ಜಾತಿಗಳನ್ನು ಕೈಬಿಟ್ಟಿದ್ದು, ಸರ್ಕಾರ ಈ ಮೂಲ ಆದಿವಾಸಿಗಳನ್ನು ಸೇರಿಸಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ಮಾಡಲಾಗುವುದು.
ರಾಜ್ಯದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಕ್ಕಿಪಿಕ್ಕಿ ಮತ್ತು ಅಲೆಮಾರಿಗಳು ಜೀವನ ನಡೆಸುತ್ತಿದ್ದು, ಈ ಸಮುದಾಯಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ನಂತರ ಸಮಿತಿಯ ತಂಡವನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನೆಯ ಉಪಾಧ್ಯಕ್ಷ ರಾಮಣ್ಣ ಹರಣಶಿಕಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಾಸುದೇವ ಕಾಳೆ, ಸದಸ್ಯ ಕೃಷ್ಣಾ ಹರಣಶಿಕಾರಿ,
ಧಾರವಾಡ ಜಿಲ್ಲಾ ಆದಿವಾಸಿ ಪಾರ್ಧಿ ಹರಣಶಿಕಾರಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಭೋವಿರಾಜ್, ಖಜಾಂಚಿ ಗಣೇಶ ಹರಣಶಿಕಾರಿ, ಉಪ ಖಜಾಂಚಿ ಬಸವರಾಜ್ ಅಣ್ಣಿಗೇರಿ, ದಾರವಾಡ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರ, ಉಪಾಧ್ಯಕ್ಷ ಪ್ರಕಾಶ ಕಟ್ಟಿಮನಿ, ಮೇದಾರ್ ಸಮಘದ ಅಧ್ಯಕ್ಷ ಎಂ.ಗಾಳಿಕುಮಾರ,
ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ, ಕೋಶಾಧ್ಯಕ್ಷ ಈರಣ್ಣ, ಮುಖಂಡರಾದ ಡಾ.ವಿಕಾಸ ಕಾಳೆ, ಗೋವಿಂದ ಚವ್ಹಾಣ, ಸೋಮು ಚವ್ಹಾಣ, ಮುಖಂಡರಾದ ಮೀನಾಕ್ಷಿ ವರೇಕಲ್, ಗುನ್ನುಸಿಂಗ್, ನಾಗರಾಜ, ಕಿರಣ್, ದೇವೇಂದ್ರ, ಕೆ.ಗೋವಿಂದ ಸೇರಿದಂತೆ ಸಮಾಜದವರು ಇದ್ದರು.