ಇಂಡಿ

ಇಂಡಿಯ ಎಫ್‌.ಕೆ. ದೋಶಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಧನೆ

ಇಂಡಿಯ ಎಫ್‌.ಕೆ. ದೋಶಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಸಾಧನೆ


ಲೋಕದರ್ಶನ ವರದಿ 

           ಇಂಡಿ 12 :ವಿಜಯಪುರದ ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ವತಿಯಿಂದ ನವೆಂಬರ್ 2 ಮತ್ತು 3ರಂದು ಆಯೋಜಿಸಲಾಗಿದ್ದ ’ಐಬಿಡಿಎ 4.0 ಉತ್ಸವದಲ್ಲಿ ಇಂಡಿಯ ಎಫ್‌.ಕೆ. ದೋಶಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆ ಮೆರೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

        ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಎರಡು ವಿಭಾಗಗಳಲ್ಲಿ ಪ್ರಥಮ ಬಹುಮಾನ ಹಾಗೂ ಒಂದು ವಿಭಾಗದಲ್ಲಿ ತೃತೀಯ ಬಹುಮಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ರಸಪ್ರಶ್ನೆ (ಕ್ವಿಜ್) ಸ್ಪರ್ಧೆ: ಲಕ್ಷ್ಮಿ ಶಿವಶಂಪಿ, ಆಶಿಷ್ ರಾಠೋಡ ಮತ್ತು ಮುಸ್ತಫಾ ಅಹಿರಸಂಗ ಅವರು ಸಾಮಾನ್ಯ ಜ್ಞಾನ, ತ್ವರಿತ ಚಿಂತನೆ ಹಾಗೂ ತಂಡದ ಸಮನ್ವಯವನ್ನು ಪ್ರದರ್ಶಿಸಿ ಪ್ರಥಮ ಬಹುಮಾನ ಗಳಿಸಿದ್ದಾರೆ.

            ಪೋಸ್ಟರ್ ಪಲ್ಸ್‌ (ಪೋಸ್ಟರ್ ಪ್ರಸ್ತುತಿ) ಸ್ಪರ್ಧೆ: ಧಾನೇಶ್ವರಿ ತಮಶೆಟ್ಟಿ ಮತ್ತು ತೇಜಸ್ವಿನಿ ಇರನಕೇರಿ ಅವರು ತಮ್ಮ ಸೃಜನಶೀಲತೆ, ಪ್ರಸ್ತುತಿಕರಣ ಕೌಶಲ ಮತ್ತು ನವೀನ ಆಲೋಚನೆಗಳ ಮೂಲಕ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಸ್ಪೆಕ್ಟ್ರಮ್ (ಯೋಜನಾ ಪ್ರದರ್ಶನ) ಸ್ಪರ್ಧೆ: ರಚನಾ ಮತ್ತು ಸೇವಂತಿ ಹಕ್ಕಿ ಅವರು ತೃತೀಯ ಬಹುಮಾನ ಪಡೆದಿದ್ದಾರೆ.

           ಈ ವಿದ್ಯಾರ್ಥಿಗಳ ಯೋಜನೆಗೆ   ಗಂಗಾಧರ ಕವಲಗಿ ಅವರು ಮಾರ್ಗದರ್ಶನ ನೀಡಿದ್ದು, ಇವರ ಪ್ರೋತ್ಸಾಹವು ಈ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಭಿನಂದನೆ ಮತ್ತು ಪ್ರೋತ್ಸಾಹ: ವಿದ್ಯಾರ್ಥಿಗಳ ಈ ಭರ್ಜರಿ ಸಾಧನೆಗೆ ಕಾಲೇಜಿನ ಪಿಯು ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಶೈಕ್ಷಣಿಕ ಸಲಹೆಗಾರರು ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಸೂಚಿಸಿದ್ದಾರೆ.

            ಕಾಲೇಜಿನ ಅಧ್ಯಕ್ಷರಾದ ಡಿ.ಆರ್‌. ಶಹಾ ಮತ್ತು ಆಡಳಿತಾಧಿಕಾರಿ ಕಲ್ಪನಾ ಶಹಾ ಅವರು ವಿಜೇತ ವಿದ್ಯಾರ್ಥಿಗಳನ್ನು, ಮಾರ್ಗದರ್ಶಕರನ್ನು ಹಾಗೂ ಬೋಧಕವರ್ಗವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳು ನವೀನ ಆಲೋಚನೆಗಳನ್ನು ಮೈಗೂಡಿಸಿಕೊಂಡು ಹೆಚ್ಚಿನ ಶೈಕ್ಷಣಿಕ ಹಾಗೂ ಪಠ್ಯೇತರ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಉತ್ತೇಜಿಸಿದ್ದಾರೆ. 


ಸುದ್ದಿ ಓದಿ