ಇಂಡಿ

ಹಿರೇರೂಗಿ ಜಟ್ಟಿಂಗೇಶ್ವರರ ಜಾತ್ರೆ ದೀಪಾವಳಿಯಿಂದ ಆರಂಭ

ಹಿರೇರೂಗಿ ಜಟ್ಟಿಂಗೇಶ್ವರರ ಜಾತ್ರೆ ದೀಪಾವಳಿಯಿಂದ ಆರಂಭ



ಲೋಕದರ್ಶನ ವರದಿ  

            ಇಂಡಿ 07:  ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನೆಲೆಸಿರುವ ಜಟ್ಟಿಂಗೇಶ್ವರ ದೇವರ ಗುಡಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವಿ ಶಕ್ತಿ ಕೇಂದ್ರವಾಗಿದೆ. ಪಾವನ ಪುಣ್ಯಭೂಮಿಯಲ್ಲಿ ಅನಾದಿ ಕಾಲದಲ್ಲಿ ಮಲೆನಾಡಿನಿಂದ ತಾಲೂಕಿನ ಹಿರೇರೂಗಿ ಗ್ರಾಮದ ಹಳ್ಳದ ದಂಡೆಯ ಮೇಲೆ ನರಸಿಂಹ ದೇವರ ಕ್ರೋಧಾಗ್ನಿ ಅವತಾರಿಯಂತೆ ನೆಲೆ ನಿಂತ ’ಮಲ್ನಾಡ ಗೂಳಿ’ ಎಂದೇ ಪ್ರಸಿದ್ಧಿ ಹೊಂದಿದ ಜಗದೊಡೆಯ ಜಟ್ಟಿಂಗೇಶ್ವರರ ಜಾತ್ರೆ ದೀಪಾವಳಿ ಹಬ್ಬದ ನಿಮಿತ್ತ ರವಿವಾರದಿಂದ ಆರಂಭವಾಗುವದು.

          ಜಟ್ಟಿಂಗೇಶ್ವರರ ಜಾತ್ರೆ ವರ್ಷದಲ್ಲಿ ಮೂರು ಬಾರಿ ನಡೆಯುವ ವಾಡಿಕೆಯಿದೆ. ಪ್ರತೀ ವರ್ಷ ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಯಂದು ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿ ಉತ್ಸವದಲ್ಲಿ ಬಳಗಾನೂರ ಗ್ರಾಮದ ಕೇದಾರ ಲಿಂಗೇಶ್ವರ, ಬನ್ನಟ್ಟಿ ಗ್ರಾಮದ ಲಾಯಮ್ಮತಾಯಿ, ತೆನಹಳ್ಳಿ ಗ್ರಾಮದ ಜನವೇರಿಸಿದ್ದ, ಬೋಳೆಗಾಂವ ಗ್ರಾಮದ ಬೀರಲಿಂಗೇಶ್ವರ, ತಡವಲಗಾ ಗ್ರಾಮದ ಶ್ರೀ ಭೀರಲಿಂಗೇಶ್ವರ, ರೂಗಿ ಗ್ರಾಮದ ಸರಗನಾಡ ರೇವಣಸಿದ್ದ ಹಾಗೂ ನರಸಮ್ಮ ತಾಯಿಯ ಚೌಕಿ ಪ್ರಮುಖವಾಗಿ ಉಪಸ್ಥಿತಿಯಾಗುತ್ತವೆ.

            ನದಿಯಿಂದ ಪವಿತ್ರ ಜಲವನ್ನು ತಂದು ದೇವರಿಗೆ ಅಭಿಷೇಕ ಮಾಡುವ ವಿಶೇಷ ವಾಡಿಕೆಯಿದೆ. ಬಂದ ಭಕ್ತರಿಗೆ ದಾಸೋಹ, ವಾಲಗ, ಡೊಳ್ಳಿನ ಗಾಯನ ಹಾಗೂ ದೀಪಾವಳಿ ಹಬ್ಬದ ದಿನ ಹಿರೇರೂಗಿ ಗ್ರಾಮದ ನಡುರ ಲಕ್ಷ್ಮಿ ದೇವಾಲಯದ ಹತ್ತಿರ ಪಟ್ಟದ ಪೂಜಾರಿಗಳಿಂದ ಮಳೆ ಬೆಳೆಗಳಿಗೆ ಸಂಬಂಧಿಸಿದ ದೇವರ ಹೇಳಿಕೆಗಳು ನಡೆಯುವವು. ದೇವರುಗಳ ಭೇಟಿ ನಡೆಯುವುದು ಇಲ್ಲಿನ ವಿಶೇಷ. ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸಿ ಪುನೀತರಾಗಬೇಕೆಂದು ಜಾತ್ರಾ ಕಮೀಟಿ ಅಧ್ಯಕ್ಷ ಮಾಳಪ್ಪ ಪೂಜಾರಿ ಹಾಗೂ ಕಮೀಟಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ