ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬು ನಾಶ; ಪರಿಹಾರಕ್ಕೆ ಬಿ.ಡಿ.ಪಾಟೀಲ ಆಗ್ರಹ
ಇಂಡಿ 06 : ತಾಲೂಕಿನ ಹಂಜಗಿ ಗ್ರಾಮದ ಸಿದ್ದಪ್ಪ ನಿಂಗಾರಿ ಅವರಿಗೆ ಸೇರಿದ ಸರ್ವೇ ನಂಬರ್ 370/1ಅರಲ್ಲಿನ 6 ಎಕರೆ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸಂಪೂರ್ಣ ಸುಟ್ಟು ನಾಶವಾಗಿದ್ದು, ರೈತರಿಗೆ ಭಾರಿ ನಷ್ಟ ಉಂಟಾಗಿದೆ.ವಿಷಯ ತಿಳಿದು ಜೆಡಿಎಸ್ ಮುಖಂಡರಾದ ಬಿ.ಡಿ. ಪಾಟೀಲ ಅವರು ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಇಂಡಿ ತಾಲೂಕಿನಲ್ಲಿ ಈಗಾಗಲೇ ಸುಮಾರು 15ರಿಂದ 20 ಕಬ್ಬಿನ ಹೊಲಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸುಟ್ಟು ನಾಶವಾಗಿದ್ದರೂ, ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಬರಗಾಲದ ಪರಿಸ್ಥಿತಿಯಲ್ಲಿ ರೈತರು ಇದ್ದ ಅಲ್ಪಸ್ವಲ್ಪ ನೀರಿನಲ್ಲಿಯೇ ಕಷ್ಟಪಟ್ಟು ಬೆಳೆದ ಕಬ್ಬಿನ ಬೆಳೆ ಕಣ್ಣೆದುರೇ ಸುಟ್ಟು ಹೋಗಿರುವುದು ದುರದೃಷ್ಟಕರ. ಸರ್ಕಾರ ಕೂಡಲೇ ಹಾನಿಗೊಳಗಾದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ, ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಯ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿ.ಡಿ. ಪಾಟೀಲ ಒತ್ತಾಯಿಸಿದರು.