ತುಮಟಿ ಗ್ರಾಮದಲ್ಲಿ ಐಸಿಎಆರ್-ಐಐಎಸ್ಡಬ್ಲ್ಯೂಸಿ ವತಿಯಿಂದ ‘ಕ್ಷೇತ್ರ ಬಚಾವೋ ಅಭಿಯಾನ’
ಲೋಕದರ್ಶನ ವರದಿ
ಬಳ್ಳಾರಿ,ನ.06: ಸಮಗ್ರ ಪೋಷಕಾಂಶ ನಿರ್ವಹಣೆ, ಮಣ್ಣಿನ ಫಲವತ್ತತೆ ರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ, ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಬಳ್ಳಾರಿ ಸಂಶೋಧನಾ ಕೇಂದ್ರದ ವತಿಯಿಂದ ಸಂಡೂರು ತಾಲೂಕಿನ ತುಮಟಿ ಗ್ರಾಮದಲ್ಲಿ ಶುಕ್ರವಾರ ‘ಕ್ಷೇತ್ರ ಬಚಾವೋ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಹಿರಿಯ ಕೃಷಿ ಅರ್ಥಶಾಸ್ತ್ರ ವಿಜ್ಞಾನಿ ಡಾ. ರವಿ ದುಪ್ದಲ್, ಪರಿಸರಸ್ನೇಹಿ ಕೃಷಿ, ಬೆಳೆ ವೈವಿಧ್ಯೀಕರಣ ಹಾಗೂ ಪೋಷಕಾಂಶಗಳ ಸಮರ್ಕ ಚಕ್ರ ನಿರ್ವಹಣೆಯು ಮಳೆಯಾಶ್ರಿತ ಕೃಷಿಯ ಸುಸ್ಥಿರತೆಗೆ ಅನಿವಾರ್ಯ. ರೈತರು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪಿಎಂ-ಕಿಸಾನ್, ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮುಂತಾದ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಣ್ಣು ವಿಜ್ಞಾನಿ ಡಾ. ಕವಿತಾ ಪಿ. ಜಾಧವ್ ಅವರು ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿ ನೀಡಿ, ರೈಜೋಬಿಯಂ, ಅಜೋಸ್ಪಿರಿಲ್ಲಂ, ಟ್ರೈಕೋಡರ್ಮಾ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯಾಗಳಂತಹ ಜೈವಿಕ ಪರಿಕರಗಳು ಮಣ್ಣಿನಿಂದ ಹರಡುವ ರೋಗಗಳನ್ನು ನಿಯಂತ್ರಿಸಿ, ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ಸಾವಯವ ಇಂಗಾಲದ ವೃದ್ಧಿಗೆ ಹಸಿರೆಲೆ ಗೊಬ್ಬರ ಮತ್ತು ಸಾವಯವ ಗೊಬ್ಬರಗಳ ಬಳಕೆ ಅಗತ್ಯ. ರೈತರು ಕಡ್ಡಾಯವಾಗಿ ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿ, ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಪೋಷಕಾಂಶಗಳನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಭಾಗವಾಗಿ ವಿಜ್ಞಾನಿಗಳು ರೈತರಿಗೆ ವೈಜ್ಞಾನಿಕವಾಗಿ ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನಗಳ ಕುರಿತು ಸ್ಥಳದಲ್ಲೇ ಪ್ರಾಯೋಗಿಕ ತರಬೇತಿ ನೀಡಿದರು.
ರೈತರು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ತಮ್ಮ ಬೆಳೆ, ಪೋಷಕಾಂಶ ನಿರ್ವಹಣೆ ಹಾಗೂ ಮಣ್ಣು-ನೀರು ಸಂರಕ್ಷಣೆಗೆ ಸಂಬಂಧಿಸಿದ ಸಂದೇಹಗಳನ್ನು ಪರಿಹರಿಸಿಕೊಂಡರು. ಗ್ರಾಮದ ರೈತರು ಹಾಗೂ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.