ಇಂಡಿ

ಇಂಡಿ ನಗರದಲ್ಲಿ ಸಮಸ್ಯೆ ನಿವಾರಣೆಗೆ: ಶಂಕರಗೌಡ ಪಾಟೀಲ ಆಗ್ರಹ

ಇಂಡಿ ನಗರದಲ್ಲಿ ಸಮಸ್ಯೆ ನಿವಾರಣೆಗೆ: ಶಂಕರಗೌಡ ಪಾಟೀಲ ಆಗ್ರಹ

ಲೋಕದರ್ಶನ ವರದಿ 

          ಇಂಡಿ 09: ನಗರದಲ್ಲಿ ಹಾಗೂ ತಾಲೂಕಿನಲ್ಲಿ ತಲೆದೋರಿರುವ ತೀವ್ರ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಅವರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 25 ದಿನಗಳಿಂದ ಇಂಡಿ ನಗರಕ್ಕೆ ಹನಿ ನೀರು ಬಿಡದೆ ನಾಗರೀಕರನ್ನು ಸಂಕಷ್ಟಕ್ಕೆ ತಳ್ಳಲಾಗಿದ್ದು, ಕೂಡಲೇ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಲು ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

           ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂಡಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಹಾಹಾಕಾರ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಕಳೆದ ಮೂರು ವಾರಗಳಿಗೂ ಹೆಚ್ಚು ಸಮಯದಿಂದ ನಗರಕ್ಕೆ ಸಮರ​‍್ಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ನಾಗರಿಕರು, ಮಹಿಳೆಯರು, ವೃದ್ಧರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ದಿನನಿತ್ಯದ ಅಗತ್ಯಗಳಿಗಾಗಿ ಕೊಡ ಹಿಡಿದು ನೀರಿಗಾಗಿ ಅಲೆಯುವಂತಾಗಿದೆ. ಜನಸಾಮಾನ್ಯರ ಈ ಗಂಭೀರ ಪರಿಸ್ಥಿತಿಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿರುವುದು ಖಂಡನೀಯ" ಎಂದು ಕಿಡಿಕಾರಿದರು.

            "ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ಅಗತ್ಯವಿರುವಷ್ಟು ನೀರನ್ನು ತಕ್ಷಣವೇ ಹರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮುಂದಿನ ಕೆಲವೇ ದಿನಗಳಲ್ಲಿ ಇಂಡಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ, ಪಕ್ಷದ ಪ್ರಮುಖರು ಹಾಗೂ ಇಡೀ ನಗರದ ನಾಗರಿಕರನ್ನು ಒಗ್ಗೂಡಿಸಿ ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು.

                 ಇದರಿಂದಾಗುವ ಕಾನೂನು ಸುವ್ಯವಸ್ಥೆಯ ಲೋಪಕ್ಕೆ ನೇರವಾಗಿ ಜಿಲ್ಲಾಡಳಿತವೇ ಹೊಣೆ ಯಾಗಬೇಕಾಗುತ್ತದೆ" ಎಂದು ಶಂಕರಗೌಡ ಪಾಟೀಲ ಅವರು ಎಚ್ಚರಿಸಿದರು. ಕಬ್ಬಿಗೆ ಏಕರೂಪ ದರ ಹಾಗೂ ಬರ ಪರಿಹಾರಕ್ಕೆ ತೀವ್ರ ಒತ್ತಾಯ: ಇದೇ ಸಂದರ್ಭದಲ್ಲಿ ತಾಲೂಕಿನ ಬೆನ್ನೆಲುಬಾದ ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, "ಇಡೀ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕೃಷಿ ವಲಯ ಸಂಪೂರ್ಣ ನೆಲಕಚ್ಚಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಸಕ್ಕರೆ ಕಾರ್ಖಾನೆಗಳು ರೈತರನ್ನು ಶೋಷಣೆ ಮಾಡುತ್ತಿವೆ. ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳೂ ಕಬ್ಬಿಗೆ ಒಂದೇ ರೀತಿಯ ಏಕರೂಪದ ಮಾರುಕಟ್ಟೆ ದರವನ್ನು ಕಡ್ಡಾಯವಾಗಿ ನಿಗದಿಪಡಿಸಬೇಕು.

            ಜಿಲ್ಲೆಯ ಯಾವುದೇ ಕಾರ್ಖಾನೆಯೂ ರೈತರಿಗೆ ವಂಚಿಸದಂತೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು" ಎಂದರು. "ಬರಗಾಲದ ಹೊಡೆತಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿರುವ ಪ್ರತಿಯೊಬ್ಬ ರೈತನಿಗೂ ಸರ್ಕಾರ ತಕ್ಷಣವೇ ಆಸರೆಯಾಗಬೇಕು. ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ಧನವನ್ನು ಘೋಷಿಸಬೇಕು ಹಾಗೂ ಗರಿಷ್ಠ ಐದು ಎಕರೆವರೆಗೆ ಕಡ್ಡಾಯವಾಗಿ ಬರ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು. ಸರ್ಕಾರ ಕೇವಲ ಭರವಸೆ ನೀಡದೆ ಪ್ರಸ್ತುತ ಸಾಲಿನಲ್ಲೇ ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡಿ ರೈತರ ಆತ್ಮಹತ್ಯೆಗಳನ್ನು ತಡೆಯಬೇಕು" ಎಂದು ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದರು. 


ಸುದ್ದಿ ಓದಿ