ಇಂಡಿ ನಗರದಲ್ಲಿ ಬೇಸಿಗಿಯ ಮುನ್ನ ನೀರಿಗಾಗಿ ಹಾಹಾಕಾರ ವರದಿ: ಸಚೀನ ಎಸ್ ಇಂಡಿ
ಇಂಡಿ 11 : ಭವಿಷ್ಯದಲ್ಲಿ ತಾಲೂಕಿನಿಂದ ಜಿಲ್ಲಾ ಕೇಂದ್ರವಾಗಿ ಬಡ್ತಿ ಪಡೆಯುವ ಸರದಿಯಲ್ಲಿರುವ ಗಡಿ ನಾಡು ಇಂಡಿ ನಗರದಲ್ಲಿ ಕಳೆದ 28 ದಿನಗಳಿಂದ ಕೆಲವು ವಾರ್ಡುಗಳಲ್ಲಿ ಕುಡಿಯುವ ನೀರು ಸರಬರಾಜಾಗದೆ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಗರದ ಬಹುತೇಕ ವಾರ್ಡ್ಗಳಲ್ಲಿ ನಳಗಳು ಒಣಗಿಬಿದ್ದಿದ್ದು, ನೀರಿಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ಬಿಂದಿಗೆ ಹಿಡಿದು ಖಾಸಗಿ ಬೋರ್ವೆಲ್ ಹಾಗೂ ದೂರದ ತೋಟದ ಮನೆಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಹೌದು 28 ದಿನಗಳ ನೀರಿಲ್ಲದ ಪರದಾಟ: ಕಳೆದ ಸುಮಾರು ನಾಲ್ಕು ವಾರಗಳಿಂದ ನಗರಸಭೆ ವತಿಯಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಹಣ ನೀಡಿ ಟ್ಯಾಂಕರ್ ನೀರು ಖರೀದಿಸುವ ಅನಿವಾರ್ಯತೆಗೆ ಸಿಲುಕಿವೆ. ತಾಂತ್ರಿಕ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯದಿಂದಾಗಿ ಈ ಅಭಾವ ಎದುರಾಗಿದ್ದು, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕೇಂದ್ರದ ಅರ್ಹತೆಗೆ ಧಕ್ಕೆ ಇಂಡಿ ತಾಲೂಕನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂಬ ದಶಕಗಳ ಬೇಡಿಕೆ ಹಾಗೂ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಮೂಲಸೌಕರ್ಯ, ಸಾರಿಗೆ ಹಾಗೂ ಭೌಗೋಳಿಕ ವಿಸ್ತೀರ್ಣದಲ್ಲಿ ಅರ್ಹತೆ ಹೊಂದಿದ್ದರೂ, ನಗರಕ್ಕೆ ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸಲು ಸಾಧ್ಯವಾಗದಿರುವುದು ಆಡಳಿತ ಯಂತ್ರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.