ಮುಂದಗೋಡ

ಹಳೂರ ಓಣಿಯಲ್ಲಿ ಹೋರಿ ಓಟದ ಅಬ್ಬರ; ಸಾವಿರಾರು ಜನರ ನಡುವೆ ಯುವಕರ ಸಾಹಸ

ಹಳೂರ ಓಣಿಯಲ್ಲಿ ಹೋರಿ ಓಟದ ಅಬ್ಬರ; ಸಾವಿರಾರು ಜನರ ನಡುವೆ ಯುವಕರ ಸಾಹಸ


ಲೋಕದರ್ಶನ ವರದಿ 

           ಮುಂಡಗೋಡ 11 : ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ಪಟ್ಟಣದ ಹಳೂರ ಓಣಿಯಲ್ಲಿ ಮಂಗಳವಾರ ನಡೆದ ಸಾಂಪ್ರದಾಯಿಕ ಹೋರಿ ಬೆದರಿಸುವ ಸ್ಪರ್ಧೆ ಅದ್ಧೂರಿಯಾಗಿ ಜರುಗಿತು. ತಾಲೂಕು ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ರೈತರು ವಿವಿಧ ಬಣ್ಣಗಳ ಅಲಂಕಾರಗಳಿಂದ ಸಿಂಗರಿಸಿದ ಹೋರಿಗಳನ್ನು ಸ್ಪರ್ಧೆಗೆ ತಂದಿದ್ದರು. ಹೋರಿಗಳ ಕೊರಳಿಗೆ ಕಟ್ಟಿದ್ದ ಕೊಬ್ಬರಿ ಸರವನ್ನು ಕಿತ್ತುಕೊಳ್ಳಲು ನೂರಾರು ಯುವಕರು ಮುಗಿಬಿದ್ದ ದೃಶ್ಯ ರೋಚಕವಾಗಿತ್ತು.

      ಒಂದು ಹೋರಿಯ ಹಿಂದೆ ಇಪ್ಪತ್ತಕ್ಕೂ ಹೆಚ್ಚು ಯುವಕರು ಓಡುತ್ತಿದ್ದರೆ, ಕೆಲವು ಹೋರಿಗಳು ಯಾರ ಕೈಗೂ ಸಿಗದೆ ವೇಗವಾಗಿ ಓಡಿ ನೋಡುಗರಲ್ಲಿ ರೋಮಾಂಚನ ಮೂಡಿಸಿದವು. ಹೋರಿಗಳನ್ನು ಹಿಡಿದ ಯುವಕರು ಮಾಲೀಕರು ಘೋಷಿಸಿದ್ದ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಸಾವಿರಾರು ಜನರು ಸೇರಿ ಸಾಂಪ್ರದಾಯಿಕ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. 


ಸುದ್ದಿ ಓದಿ