ಮುಂದಗೋಡ

ಬೆಳ್ಳಿ ಆಭರಣಕ್ಕೆ ಕನ್ನ ಹಾಕಿದ ಮಹಿಳೆಯರು ಪೊಲೀಸ್ ಬಲೆಗೆ!

ಬೆಳ್ಳಿ ಆಭರಣಕ್ಕೆ ಕನ್ನ ಹಾಕಿದ ಮಹಿಳೆಯರು ಪೊಲೀಸ್ ಬಲೆಗೆ!


ಲೋಕದರ್ಶನ ವರದಿ 

         ಮುಂಡಗೋಡ 07: ಪಟ್ಟಣದ ರಾಜಲಕ್ಷ್ಮಿ ಜ್ಯುವೆಲ್ಲರ್ಸ್ನಲ್ಲಿ ಬೆಳ್ಳಿ ಆಭರಣ ಕಳವು ಮಾಡಿದ್ದ ಅಂತರ ಜಿಲ್ಲಾ ಇಬ್ಬರು ಮಹಿಳಾ ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿ, ಕಳವಾದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಅಕ್ಟೋಬರ್ 17ರಂದು ಮಧ್ಯಾಹ್ನ 3.45ರಿಂದ 4.15ರ ಅವಧಿಯಲ್ಲಿ ಇಬ್ಬರು ಮಹಿಳೆಯರು ಸುಮಾರು 1.30 ಲಕ್ಷ ಮೌಲ್ಯದ, 700 ಗ್ರಾಂ ತೂಕದ ನಾಲ್ಕು ಜೊತೆ ಬೆಳ್ಳಿಯ ಕಾಲು ಚೈನ್ಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.

         ಈ ಕುರಿತು ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರ ಜಿಲ್ಲಾ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ಶಾಂತಾ ಮದನ ಪೂಜಾರಿ (52) ಹಾಗೂ ಶಾಂತಾ ಮೂರ್ತಿ ಅಂಗಡಿ (46) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳವಾದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ.6ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

            ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್‌., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಮುಂಡಗೋಡ ಪೊಲೀಸ್ ನೀರೀಕ್ಷಕ ರಮೇಶ್ ಹಾನಾಪುರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್‌ಐ ಮಂಜುನಾಥ ಗೌಡರ, ಪಿಎಸ್‌ಐ ನಿರಂಜನ ಕರಣದಿನ್ನಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ