ಮಾನವನಿಂದ ಮಾನವನ ಶೋಷಣೆ ಕೊನೆಗಾಣಿಸಿದ ನವೆಂಬರ್ ಮಹಾಕ್ರಾಂತಿ ವರ್ಷಾಚರಣೆ
ಲೋಕದರ್ಶನ ವರದಿ
ಧಾರವಾಡ 07 : ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ, ಪ್ರಪಂಚದಲ್ಲೇ ಮೊದಲ ಬಾರಿಗೆ ಕಾರ್ಮಿಕ ವರ್ಗದ ಅಧಿಕಾರ ಸ್ಥಾಪನೆಗೆ ಕಾರಣವಾದ 1917ರಲ್ಲಿ ರಷ್ಯಾದಲ್ಲಿ ಜರುಗಿದ ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯ 109ನೇ ವರ್ಷಾಚರಣೆ ಕಾರ್ಯಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್.ಯು.ಸಿ.ಐ-ಸಿ) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನವೆಂಬರ್ ಮಹಾಕ್ರಾಂತಿಯ ಶಿಲ್ಪಿಗಳಾದ ಕಾಮ್ರೇಡ್ ಲೆನಿನ್, ಕಾಮ್ರೆಡ್ ಸ್ಟಾಲಿನ್ ರವರ ಭಾವಚಿತ್ರಕ್ಕೆ ಜಿಲ್ಲಾ ಕಾರ್ಯದರ್ಶಿ ಕಾ. ರಾಮಾಂಜನಪ್ಪ ಆಲ್ದಳ್ಳಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ವರ್ಗದ ಅಂತರಾಷ್ಟ್ರೀಯ ಗೀತೆಯನ್ನು ಹಾಡಲಾಯಿತು.
ರಷ್ಯಾದ ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯಿಂದ ಸ್ಫೂರ್ತಿ ಪಡೆದು ಭಾರತದಲ್ಲಿ ಮರಣಾಸನ್ನ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು, ದೇಶದ ರೈತರು, ಕೂಲಿ-ಕಾರ್ಮಿಕರು, ದುಡಿಯುವ ವರ್ಗ, ಮದ್ಯಮವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಕೊನೆಗಾಣಿಸಲು ಸಮಾಜವಾದಿ ಕ್ರಾಂತಿ ನೆರವೇರಿಸಲು ಪಣತೊಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಲಕ್ಷ್ಮಣ ಜಡಗಣ್ಣವರ, ದೀಪಾ ಧಾರವಾಡ, ಶರಣು ಗೋನವಾರ, ಮಧುಲತಾ ಗೌಡರ್, ಭವಾನಿಶಂಕರ್ ಎಸ್ ಗೌಡ ಸದಸ್ಯರಾದ ಗಂಗಾ ಕೋಕರೆ, ಸಿಂಧು ಕೌದಿ, ದೇವಮ್ಮ ದೇವತ್ಕಲ್ ಮುಂತಾದವರು ಭಾಗವಹಿಸಿದ್ದರು.