ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ: ಆಪ್ ಆರೋಪ
ವಿಜಯಪುರ 11 : ಖಾಸಗಿ ಶಾಲೆಗಳ ಪರವಾಗಿ ತಮ್ಮ ಸರ್ಕಾರ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಹೇಳಿರುವುದು ರಾಜ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕಿರುವ ನೈಜ ಕಾಳಜಿಯನ್ನು ಬಯಲು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯದಂತೆ ಪ್ರತಿಯೊಂದು ಸರ್ಕಾರದ ಆದ್ಯ ಕರ್ತವ್ಯ ಶಿಕ್ಷಣ ಮತ್ತು ಆರೋಗ್ಯವನ್ನು ಜನರಿಗೆ ಉಚಿತವಾಗಿ ಅಥವಾ ಕೈಗೆಟುಕುವ ದರದಲ್ಲಿ ಒದಗಿಸುವುದಾಗಿದೆ.
ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ಕಾಂಗ್ರೆಸ್ ರಾಜ್ಯ ಸರ್ಕಾರದ ರಿಯಲ್ ಎಸ್ಟೇಟ್ ನೀತಿಯಿಂದಾಗಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯೂ ಸಹ ಖಾಸಗಿ ಶಿಕ್ಷಣ ಮಾಫಿಯಾಗಳ ಹಿಡಿತಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ವಿಜಯಪುರ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಟೀಕಿಸಿದ್ದಾರೆ. ಈಗಾಗಲೇ ರಾಜ್ಯದ ಸರ್ಕಾರಿ ಶಾಲೆಗಳ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಹಾಗೂ ಲಕ್ಷಾಂತರ ಎಕರೆ ಜಮೀನುಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ನೆಪದಲ್ಲಿ ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಇದು ಶಿಕ್ಷಣ ಸುಧಾರಣೆಯಲ್ಲ, ಬದಲಾಗಿ ಸರ್ಕಾರಿ ಆಸ್ತಿಗಳನ್ನು ಖಾಸಗಿ ಹಿತಾಸಕ್ತಿಗಳಿಗೆ ಧಾರೆ ಎರೆಯುವ ಅಪಾಯಕಾರಿ ರಿಯಲ್ ಎಸ್ಟೇಟ್ ದಂಧೆಗೆ ಮುನ್ನುಡಿ ಬರೆದಂತಾಗಿದೆ. ರಾಜಕೀಯ ಪ್ರಭಾವಿಗಳು ಮತ್ತು ಪ್ರಬಲ ವ್ಯಕ್ತಿಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಗೆ ಸರ್ಕಾರ ಮಣೆ ಹಾಕುತ್ತಿರುವ ಅನುಮಾನ ಮೂಡುತ್ತಿದೆ.ದೆಹಲಿ ಮತ್ತು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಆಧುನಿಕ ಸೌಲಭ್ಯಗಳು, ಗುಣಮಟ್ಟದ ಬೋಧನೆ ಮತ್ತು ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ರೂಪಿಸಿವೆ.