ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ: ನದಿ ತೀರದ ಜನರ ಹಿತ ಕಾಪಾಡಲು ಆಗ್ರಹ
ಬೀಳಗಿ 11: ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಹಾಗೂ ಘಟಪ್ರಭಾ ನದಿ ತೀರದ ಜನರು, ಜಾನುವಾರುಗಳು ಮತ್ತು ಜಲಚರಗಳ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಾ ನದಿ ತೀರದ ನಿವಾಸಿ ಪ್ರಕಾಶ ಅಂತರಗೊಂಡ ಆಗ್ರಹಿಸಿದ್ದಾರೆ.
ಬುಧವಾರ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ನವೆಂಬರ್ 11ರ ವೇಳೆಗೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 514 ಮೀಟರ್ಗೆ ಕುಸಿದಿದ್ದು, ನೀರಾವರಿ ಸಲಹಾ ಸಮಿತಿ (ಐಸಿಸಿ) ಸಮರ್ಕ ನಿರ್ಧಾರ ಕೈಗೊಳ್ಳದೆ ಹಿಂಗಾರು ಬೆಳೆಗಳಿಗೆ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಿರುವುದೇ ನೀರಿನ ಮಟ್ಟ ಕುಸಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
2015ರಲ್ಲಿ ಭೀಕರ ಬರಗಾಲ ಎದುರಾದ ಸಂದರ್ಭದಲ್ಲಿಯೂ ಆಲಮಟ್ಟಿ ಜಲಾಶಯದಲ್ಲಿ 517 ಮೀಟರ್ ನೀರು ಸಂಗ್ರಹವಾಗಿತ್ತು. ಆಗಿನ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಆರ್. ಪಾಟೀಲ ಅವರು ಮುಖ್ಯಮಂತ್ರಿಗಳ ಕೋರಿಕೆಯಂತೆ ಹಿಂಗಾರು ಬೆಳೆಗಳಿಗೆ ನೀರು ಹರಿಸುವುದನ್ನು ತಡೆದು ನದಿ ತೀರದ ಜನರ ಹಿತ ಕಾಪಾಡಿದ್ದರು. ಅದೇ ಮಾದರಿಯ ನಿರ್ಧಾರವನ್ನು ಈಗಲೂ ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾರಾಯಣಪುರ ಜಲಾಶಯಕ್ಕೆ ನೀರು ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸಿ, ಕೃಷ್ಣಾ ಹಾಗೂ ಘಟಪ್ರಭಾ ನದಿ ತೀರದ ಜನರ ಬದುಕು, ಜಾನುವಾರುಗಳ ಕುಡಿಯುವ ನೀರು ಮತ್ತು ಜಲಚರಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವಿನ ನಂತರ ಮುಂದಿನ ಮಳೆಗಾಲದವರೆಗೆ ಅಂದರೆ ಜುಲೈ 2027ರವರೆಗೆ ಕಬ್ಬಿನ ಬೆಳೆಗೆ ನೀರು ಪೂರೈಸುವ ಕುರಿತು ಸರ್ಕಾರ ತನ್ನ ನಿಲುವನ್ನು ಅಧಿಕೃತವಾಗಿ ಸ್ಪಷ್ಟಪಡಿಸಬೇಕು.
ಇಲ್ಲದಿದ್ದರೆ ಲಕ್ಷಾಂತರ ಎಕರೆ ಕಬ್ಬಿನ ಬೆಳೆ ನೀರಿಲ್ಲದೆ ಒಣಗುವ ಆತಂಕ ಎದುರಾಗಲಿದೆ ಎಂದು ಮನವಿಯಲ್ಲಿ ತಿಳಿಸಿದರು. ನದಿ ತೀರದ ನಿವಾಸಿ ಕಿರಣ ಬಾಳಾಗೋಳ ಮಾತನಾಡಿ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿಸಚಿವರಾಗಿರುವ ವಿಜಯಾನಂದ ಕಾಶಪ್ಪನವರ ಹಾಗೂ ಜಿಲ್ಲೆಯ ಕೃಷ್ಣಾ ತೀರದ ಜನಪ್ರತಿನಿಧಿಗಳ ಜವಾಬ್ದಾರಿಯಾಗಿರುವುದರಿಂದ, ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿರುವ ನದಿ ತೀರದ ಜನರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಶುಕ್ರವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದರೆ, ಬರುವ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರ ಕಾರ್ಯಾಲಯದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿದ್ದು ಗಿರಗಾಂವಿ, ಹನಮಂತಗೌಡ ಪಾಟೀಲ, ಬಸವರಾಜ ಹಳ್ಳದಮನಿ, ಸೋಮನಗೌಡ ಪಾಟೀಲ, ಹನಮಂತ ಸಿಂಗರೆಡ್ಡಿ, ವಿರುಪಾಕ್ಷ ಹಿರೇಮಠ ಇದ್ದರು.