ಬಳ್ಳಾರಿ

ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣಕ್ಕೆ ಹೆಜ್ಜೆ; ಜಿಲ್ಲಾಧಿಕಾರಿಗಳಿಂದ ಸೂಚನೆ

ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣಕ್ಕೆ ಹೆಜ್ಜೆ; ಜಿಲ್ಲಾಧಿಕಾರಿಗಳಿಂದ ಸೂಚನೆ
Steps taken for the construction of government employee housing; directive issued by the Deputy Com

ಲೋಕದರ್ಶನ ವರದಿ 

         ಬಳ್ಳಾರಿ 11: ದೂರದ ಜಿಲ್ಲೆಗಳಿಂದ ಬಳ್ಳಾರಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಬಹುದಿನಗಳ ವಸತಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ಕೇಂದ್ರ ಸ್ಥಾನದಲ್ಲಿಯೇ ಕಡ್ಡಾಯವಾಗಿ ವಾಸವಿರಬೇಕೆಂಬ ಸರ್ಕಾರದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ, ಬಳ್ಳಾರಿ ನಗರದಲ್ಲಿ ಸುಸಜ್ಜಿತ ಸರ್ಕಾರಿ ನೌಕರರ ವಸತಿ ಸಮುಚ್ಛಯ ನಿರ್ಮಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಸಕಾರಾತ್ಮಕ ಸ್ಪಂದನೆ ದೊರೆತಿದೆ. 

ಸರ್ಕಾರಿ ನೌಕರರು ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ವಾಸವಿರಬೇಕೆಂದು ಪ್ರಜಾ ಸೇವಾ ಇಲಾಖೆಯು ಇತ್ತೀಚೆಗೆ ಕಡ್ಡಾಯ ಆದೇಶ ಹೊರಡಿಸಿದೆ. ಆದರೆ ಮಂಗಳೂರು, ಕಾರವಾರ, ಬೀದರ್ ಹಾಗೂ ಇತರೆ ದೂರದ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬಳ್ಳಾರಿಗೆ ಆಗಮಿಸುವ ನೌಕರರಿಗೆ ಸೂಕ್ತ ವಸತಿ ಗೃಹಗಳ ಕೊರತೆ ತೀವ್ರವಾಗಿದೆ.

          ಈ ಸಮಸ್ಯೆಯನ್ನು ಮನಗಂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಡಾ. ನೆಲ್ಕುದ್ರಿ ಸದಾನಂದ ಅವರ ನೇತೃತ್ವದ ನಿಯೋಗವು, ಬಳ್ಳಾರಿ ನಗರದಲ್ಲಿ ನೌಕರರಿಗಾಗಿ ಸುಸಜ್ಜಿತ ವಸತಿ ಸಮುಚ್ಛಯವನ್ನು ನಿರ್ಮಿಸಿ, ನಿಯಮಾನುಸಾರ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರಿಗೆ ಮನವಿ ಸಲ್ಲಿಸಿತ್ತು. 

ಸಂಘದ ಮನವಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು, ಬಳ್ಳಾರಿಯಲ್ಲಿ ಸರ್ಕಾರಿ ನೌಕರರ ವಸತಿಗೃಹಗಳನ್ನು ನಿರ್ಮಿಸಲು ಅಗತ್ಯವಿರುವ ಸಮಗ್ರ ಪ್ರಸ್ತಾವನೆಯನ್ನು ಕೂಡಲೇ ತಯಾರಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಈ ತಕ್ಷಣದ ಮತ್ತು ಮಹತ್ವದ ನಿರ್ಣಯದಿಂದಾಗಿ, ದೂರದ ಜಿಲ್ಲೆಗಳಿಂದ ಬಂದು ಬಾಡಿಗೆ ಮನೆಗಳ ಅಲೆದಾಟದಲ್ಲಿದ್ದ ನೌಕರರಲ್ಲಿ ಸ್ವಂತ ವಸತಿ ಗೃಹಗಳ ನಿರ್ಮಾಣದ ಕನಸು ಚಿಗುರೊಡೆದಂತಾಗಿದೆ. ನೌಕರರ ಪರವಾದ ಈ ಮನವಿಗೆ ಸ್ಪಂದಿಸಿ, ಸಕಾರಾತ್ಮಕ ಹೆಜ್ಜೆ ಇಟ್ಟಿರುವ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಧನ್ಯವಾದಗಳನ್ನು ಅರ​‍್ಿಸಲಾಗಿದೆ. 


ಸುದ್ದಿ ಓದಿ