ಜಿಲ್ಲಾ ಮಟ್ಟದ ಪ.ಜಾ/ ಪ.ವರ್ಗದವರ ಮೇಲಿನ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ
ಲೋಕದರ್ಶನ ವರದಿ
ಗದಗ 11 : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ( ನವೆಂಬರ್ 11 ರಂದು) ಜಿಲ್ಲಾ ಮಟ್ಟದ ಪ.ಜಾ/ ಪ.ಪಂ. ಜಿಲ್ಲಾ ಜಾಗೃತ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಪ್ರತಿಷ್ಟಿತ ಶಾಲೆಗಳಿಗೆ ಅಧಿಕಾರಿಗಳು ಅನೀರೀಕ್ಷಿತ ಭೇಟಿ ನೀಡಿ ಶಾಲೆಗಳಲ್ಲಿನ ಮೂಲ ಸೌಕರ್ಯ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು ಪರೀಶೀಲನೆ ನಡೆಸಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಪ್ರೋತ್ಸಾಹಿಸುವಂತಾಗಬೇಕು. ಗುಣಮಟ್ಟದ ಶಿಕ್ಷಣವನ್ನು ಶಾಲಾ ಮಕ್ಕಳಿಗೆ ನೀಡುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಪರಿಶಿಷ್ಟ ಸಮುದಾಯ ಕಾಲೋನಿಗಳಲ್ಲಿ ರಸ್ತೆ, ವಿದ್ಯುತ್ ಪೂರೈಕೆ , ಸಮರ್ಕ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗುವಂತೆ ನೋಡಿಕೊಳ್ಳಬೇಕು. ಪ.ಜಾ/ ಪ.ಪಂ. ದೌರ್ಜನ್ಯ ಪ್ರಕರಣದಡಿ ಅರ್ಹ ಸಂತ್ರಸ್ಥರಿಗೆ ಪರಿಹಾರ ಧನ ಒದಗಿಸುವಲ್ಲಿ ವಿನಾ ಕಾರಣ ವಿಳಂಬ ಮಾಡಬಾರದು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ವಿಳಂಬವಾಗದಂತೆ ಒದಗಿಸಬೇಕು. ಅರ್ಹರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಎಸ್‌ಸಿಪಿ / ಟಿಎಸ್‌ಪಿ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಪ.ಜಾ ಪ.ಪಂ ಜನರಿಗೆ ತಲುಪಬೇಕಾದ ವಸತಿ. ವೈದ್ಯಕೀಯ. ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳು ಅರ್ಹರಿಗೆ ಸಕಾಲದಲ್ಲಿಯೆ ದೊರಕಬೇಕು. ಫಲಾನುಭವಿಗಳ ಆಯ್ಕೆಪಟ್ಟಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಸೌಲಬ್ಯಗಳ ವಿತರಣೆಯಲ್ಲಿ ದುರುಪಯೋಗವಾಗಬಾರದು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.