ವಿಜಯಪುರ

ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಹಾರಿದ ಯುವಕ: ಸ್ನೇಹಿತರಿಂದ ಸಾಹಸಿಕ ರಕ್ಷಣೆ

ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಹಾರಿದ ಯುವಕ: ಸ್ನೇಹಿತರಿಂದ ಸಾಹಸಿಕ ರಕ್ಷಣೆ


             ಕೊಲ್ಹಾರ: ಮನಸ್ತಾಪದಿಂದ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಿದ ಯುವಕನನ್ನು ಸ್ನೇಹಿತರ ತಂಡ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಢವಳೇಶ್ವರ ಗ್ರಾಮದ ಯಂಕಪ್ಪ ಸಂಗಪ್ಪ ಮೂಲಿಮನಿ (28) ರಕ್ಷಣೆಗೊಳಗಾದ ಯುವಕ.

            ಸ್ನೇಹಿತರ ಬಳಗ ಬಾಗಲಕೋಟೆಯಲ್ಲಿ ಸಿನಿಮಾ ವೀಕ್ಷಿಸಿ ಕೊಲ್ಹಾರ ಸೇತುವೆ ಮಾರ್ಗವಾಗಿ ಹಿಂದಿರುಗುತ್ತಿತ್ತು. ಈ ವೇಳೆ ಸೇತುವೆ ಮೇಲಿಂದ ವ್ಯಕ್ತಿಯೊಬ್ಬರು ನದಿಗೆ ಹಾರುವುದನ್ನು ಗಮನಿಸಿದ ಸ್ನೇಹಿತರು ತಕ್ಷಣ ವಾಹನ ನಿಲ್ಲಿಸಿ ರಕ್ಷಣೆಗೆ ಧಾವಿಸಿದರು. ವಾಹನದಲ್ಲಿದ್ದ ಹಗ್ಗವನ್ನು ನದಿಗೆ ಇಳಿಸಿ, ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಮೇಲಕ್ಕೆತ್ತಿ ರಕ್ಷಿಸಿದರು.

                ಬಳಿಕ ಯುವಕನನ್ನು ಕೊಲ್ಹಾರ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದರು.

ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಯುವಕನ ಪ್ರಾಣ ಕಾಪಾಡಿದ ವಿಜಯ ಬಾಟಿ, ಪ್ರಕಾಶ್ ಮಠಪತಿ, ಶ್ರೀಶೈಲ ಚೌಡಪ್ಪನವರ, ಉದಯ ಆಲಗೊಂಡಿ ಹಾಗೂ ವಿನಯ ಮಠಪತಿ ಅವರ ಕಾರ್ಯಕ್ಕೆ ಕೊಲ್ಹಾರ ಪೊಲೀಸ್ ಠಾಣಾಧಿಕಾರಿ ಅಶೋಕ ನಾಯಕ ಪ್ರಶಂಸೆ ವ್ಯಕ್ತಪಡಿಸಿದರು.

ಸುದ್ದಿ ಓದಿ