ಹೂವಿನ ಹಡಗಲಿ

ದೀಪಾವಳಿಗೂ ತಟ್ಟಿದ ಬೆಲೆ ಏರಿಕೆಯ ಬಿಸಿ

ದೀಪಾವಳಿಗೂ ತಟ್ಟಿದ ಬೆಲೆ ಏರಿಕೆಯ ಬಿಸಿ


                    ಹೂವಿನಹಡಗಲಿ ನ.08- ಪಟ್ಟಣದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ದೀಪಾವಳಿ ಹಬ್ಬದ ಸಂಭ್ರಮ ಕಳೆಕಟ್ಟಿದ್ದು , ಭಾನುವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.ಹೂವು, ಹಣ್ಣು, ಹಣತೆ, ಆಕಾಶಬುಟ್ಟಿ ಮತ್ತು ಹೊಸ ಬಟ್ಟೆಗಳು ಸೇರಿದಂತೆ ದೀಪಾವಳಿ ಅಲಂಕಾರಿಕ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ, ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಜೇಬಿನ ಲೆಕ್ಕಾಚಾರದ ನಡುವೆಯೇ ಹಬ್ಬದ ಸಂಭ್ರಮಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದು, ಪಟ್ಟಣದ ಶಾಸ್ತ್ರೀಯ ವೃತ್ತ, ಹಳೆ ಆಸ್ಪತ್ರೆ  ಪ್ರಮುಖ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿತ್ತು.

              ಬೆಳಗ್ಗೆಯಿಂದಲೇ ಜನರು ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು.ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳು 10ರಿಂದ 100, ಆಕಾಶಬುಟ್ಟಿ 100ರಿಂದ 1000, ಬಿದಿರು, ಬಟ್ಟೆ, ಸ್ಟಾರ್ ಹಾಗೂ ತುಳಸಿಕಟ್ಟಿಯ ಆಕಾಶಬುಟ್ಟಿಗಳ ಜತೆಗೆ ಲೈಟಿಂಗ್ ಹಣತೆ, ವಿದ್ಯುತ್ ದೀಪಗಳ ಸರಗಳಿಗೂ ಬೇಡಿಕೆ ಕಂಡುಬಂದಿದೆ. ಹೂವು-ಹಣ್ಣುಗಳ ದರವೂ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ ಎನ್ನಲಾಗಿದೆ.ಒಂದು ಮಾರು ಸೇವಂತಿಗೆ, ಕನಕಾಂಬರಿಗೆ ತಲಾ 100,  ಚೆಂಡುಹೂವು 100, ಕಮಲದ ಹೂವು 50 ಹಾಗೂ ಗುಲಾಬಿ 20ಕ್ಕೆ ಮಾರಾಟವಾಗುತ್ತಿವೆ. ಏಲಕ್ಕಿ ಬಾಳೆ  ಕೆಜಿಗೆ 150 ರೂ. ದೊಡ್ಡ ಬಾಳೆಹಣ್ಣು ಡಜನ್ಗೆ  80, ಜೋಡಿ ಕಬ್ಬು ಮತ್ತು ಬಾಳೆದಿಂಡಿಗೆ ತಲಾ 60ಕ್ಕೆ ಮಾರಾಟವಾದವು. 


ಸುದ್ದಿ ಓದಿ