200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರದರ್ಶನ
ವಿಜಯಪುರ 07: ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಇದೇ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ದಿನ ತಿಕೋಟಾದಲ್ಲಿ ‘ವಿಜ್ಞಾನ ಜಾತ್ರೆ’ ಎನ್ನುವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಂಗವಾಗಿ ಇಂದು ಶನಿವಾರ ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿ ಹಲವು ರೂಪುರೇಷೆಗಳನ್ನು ತಯಾರಿಸಲಾಯಿತು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರ್ಪ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಈ ಜಾತ್ರೆಯಲ್ಲಿ ಉಪಸ್ಥಿತರಿರಲಿದ್ದು, ತಿಕೋಟಾ ತಾಲೂಕಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಪಾಲಕರು ಮತ್ತು ಮೇಳಕ್ಕೆ ಭೇಟಿ ಕೊಡುವವರು ಸೇರಿದಂತೆ ಸುಮಾರು 10 ಸಾವಿರ ಜನರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ಸಭೆಯಲ್ಲಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ (ಗ್ರಾಮೀಣ ವಲಯ), ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಈ ವಿಜ್ಞಾನ ಜಾತ್ರೆ ನಡೆಯಲಿದೆ. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಮತ್ತು ಸಂಶೋಧನಾ ಶಕ್ತಿಯನ್ನು ಹೆಚ್ಚಿಸುವ ಮಹತ್ತರ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿದೆ. ಮಕ್ಕಳು ತಮ್ಮ ನವೀನ ಆವಿಷ್ಕಾರಗಳ ಮಾದರಿಯನ್ನು ಪ್ರದರ್ಶಿಸಲು ಈ ನೂತನ ವೇದಿಕೆ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯಿಂದ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗುವ ಸಾರ್ವಜನಿಕ ಸಭೆ ನಡೆಯಲಿದೆ. ನೂರಕ್ಕೂ ಹೆಚ್ಚು ಸ್ಟಾಲ್ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಸಂಶೋಧನೆಗಳನ್ನು ಪ್ರದರ್ಶಿಸಲಿದ್ದಾರೆ. ಬರುವವರಿಗೆ ಭೋಜನ ವ್ಯವಸ್ಥೆಯೂ ಸೇರಿ ಈ ಸಂಬಂಧ ನಡೆಸಬೇಕಾದ ತಯಾರಿ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.
200ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ವಿಜ್ಞಾನ ಪ್ರದರ್ಶನ ನಡೆಸುವ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ. ತೀಪುಗಾರರು ಈ ಮಕ್ಕಳನ್ನು ಆಯ್ಕೆ ಮಾಡಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿಭಾಗದಲ್ಲಿ ತಲಾ ಮೂರು ಬಹುಮಾನಗಳಿವೆ. ಮೊದಲ ಬಹುಮಾನ ರೂ. 25 ಸಾವಿರ, ದ್ವಿತೀಯ ಬಹುಮಾನವಾಗಿ ರೂ. 15 ಸಾವಿರ ಹಾಗೂ ತೃತೀಯ ಬಹುಮಾನ ರೂ. 10 ಸಾವಿರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಬಹುಮಾನಗಳನ್ನು ಇನ್ನೊಂದು ದಿನ ಸಮಾರೋಪ ಸಮಾರಂಭ ಮಾಡಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರೊಂದಿಗೆ ಇಡೀ ದಿನ ಡೊಳ್ಳಿನ ಪದ, ಭಜನೆ ಪದ, ಭರತ ನಾಟ್ಯ, ನಾನಾ ನೃತ್ಯ, ಹಾಡು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಶಿಕ್ಷಣ ಸಚಿವರು ಭಾಗವಹಿಸುವ ಈ ಗ್ರಾಮೀಣ ವಿಜ್ಞಾನ ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಯೋಜಿಸಲಾಯಿತು.