ವಿಜಯಪುರ

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ ನಿರ್ವಹಣೆಯಲ್ಲಿ ಲೋಪ ಆಗದಂತೆ ನಿಗಾವಹಿಸಿ

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ ನಿರ್ವಹಣೆಯಲ್ಲಿ ಲೋಪ ಆಗದಂತೆ ನಿಗಾವಹಿಸಿ
Ensure that no lapses occur in the conduct of the KPSC Gazetted Probationary Preliminary Examinatio

            ವಿಜಯಪುರ .7: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗಾಗಿ ನವೆಂಬರ್ 15ರಂದು ನಡೆಯಲಿರುವ ಪೂರ್ವಭಾವಿ ಪರೀಕ್ಷೆಯನ್ನು ಅತ್ಯಂತ ಜವಾಬ್ದಾರಿ ಹಾಗೂ ಜಾಗರೂಕತೆಯಿಂದ ನಿರ್ವಹಿಸಬೇಕು.ಯಾವುದೇ ಗೊಂದಲ,ಲೋಪದೋಷ ಅಥವಾ ಅಹಿತಕರ ಘಟನೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳಿಗೆ ಸೂಚಿಸಿದರು. 

ಶನಿವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ 20 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಒಟ್ಟು 8,117 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ್ದಾಗಿರುವುದರಿಂದ, ಈ ಹಿಂದಿನ ಪರೀಕ್ಷೆಗಳ ಅನುಭವದೊಂದಿಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿ, ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಬೇಕು ಎಂದರು. 

ಅಭ್ಯರ್ಥಿಗಳು ಮೊಬೈಲ್ ಫೋನ್, ಬ್ಯಾಗ್ ಸೇರಿದಂತೆ ನಿಷೇಧಿತ ವಸ್ತುಗಳನ್ನು  ಪ್ರವೇಶ ಸಂದರ್ಭದಲ್ಲಿ ಫ್ರಿಸ್ಕಿಂಗ್ ವ್ಯವಸ್ಥೆಯ ಮೊದಲೇ ಇರಿಸಲು ವ್ಯವಸ್ಥೆಮಾಡಿಕೊಳ್ಳಬೇಕು. ಯಾವುದೇ ಅನಗತ್ಯ ಗೊಂದಲವಾಗದಂತೆ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಆರಂಭವಾಗುತ್ತಿದ್ದಂತೆ ಕೊಠಡಿಗಳಲ್ಲಿನ ಜಾಮರ್‌ಗಳನ್ನು ಚಾಲನೆಗೊಳಿಸಬೇಕು ಎಂದು ಸೂಚಿಸಿದರು. 

ಪ್ರತಿಯೊಂದು ಪರೀಕ್ಷಾ ಕೊಠಡಿಯೂ ಸಿಸಿಟಿವಿ ಕ್ಯಾಮೆರಾದ ವ್ಯಾಪ್ತಿಗೆ ಒಳಪಡುವಂತೆ ನೋಡಿಕೊಳ್ಳಬೇಕು. ಯಾವುದೇ ಸ್ಥಳ ಕ್ಯಾಮೆರಾ ವ್ಯಾಪ್ತಿಯಿಂದ ಹೊರಗುಳಿಯದಂತೆ ಪರೀಶೀಲಿಸಬೇಕು. ವೆಬ್‌ಕಾಸ್ಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆಸಿ,ಎಲ್ಲ ಕೊಠಡಿಗಳ ದೃಶ್ಯಾವಳಿಗಳು ಸ್ಪಷ್ಟವಾಗಿ ಪ್ರಸಾರವಾಗುವುದನ್ನು ಖಚಿತಪಡಿಸಿಕೊಳ್ಳಬೇಕು.  

ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಹಾಳೆಗಳನ್ನು ನಿಗದಿತ ಸಮಯಕ್ಕೆ ಪರೀಕ್ಷಾ ಕೊಠಡಿಗಳಿಗೆ ತಲುಪಿಸಿ, ಪರೀಕ್ಷಾ ಸಾಮಗ್ರಿಗಳ ಸಿದ್ಧತೆ ಮತ್ತು ವಿತರಣೆಗೆ ಮುಂಚಿತವಾಗಿಯೇ ಯೋಜನೆ ರೂಪಿಸಬೇಕು. ಒಎಂಆರ್ ಹಾಳೆಯಲ್ಲಿ ಉತ್ತರಿಸದ ಪ್ರಶ್ನೆಗಳಿಗೆ ಸಂಬಂಧಿಸಿದ ಐದನೇ ಬಬಲ್ ಶೇಡ್ ಮಾಡುವ ನಿಯಮದ ಬಗ್ಗೆ ಅಭ್ಯರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ನಿಯಮ ಪಾಲನೆಯಾಗುವಂತೆ ಕೊಠಡಿ ಮೇಲ್ವಿಚಾರಕರು ಗಮನಹರಿಸಬೇಕು ಎಂದು ತಿಳಿಸಿದರು. 

ಪರೀಕ್ಷ ಸಂಪೂರ್ಣ ಮುಕ್ತಾಯ ಆಗುವವರೆಗೆ ಪರೀಕ್ಷಾರ್ಥಿ ಪರೀಕ್ಷಾ ಕೇಂದ್ರ ಬಿಟ್ಟು ಹೊರ ಬರುವಂತಿಲ್ಲ. ಪರೀಕ್ಷೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪರೀಕ್ಷೆಗೆ ನಿಯೋಜಿಸಲಾದ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.ಶಿಸ್ತು, ಸಮಯಪಾಲನೆ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಬೇಕು.  ಪರೀಕ್ಷೆಯ ಗೌಪ್ಯತೆ ಮತ್ತು ಪಾರದರ್ಶಕತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಓದ್ರಾಮ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ ಮಂಜುನಾಥ ಗುಳೇದಗುಡ್ಡ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಆರ್‌. ನಾಗರಾಜ, ಡಿವೈಎಸ್ಪಿ ತುಳಜಪ್ಪ ಸುಲ್ಫಿ ತರಬೇತಿದಾರರಾದ ಲಕ್ಷ್ಮಿಕಾಂತ ಕುಂಬಾರ, ಜಗದೀಶ್ ಗುಲಗಂಜಿ, ವಿಷಯ ಪರಿ ವೀಕ್ಷರಾದ ಡಯಟಿನ ಉಪನ್ಯಾಸಕ ನಾರಾಯಣ ಬಾಬಾ, ಪರೀಕ್ಷಾ ಸಂಬಂಧಿತ ವೆಬ್ ಕಾಸ್ಟಿಂಗ್ ಅಧಿಕಾರಿ ಎಸ್‌.ಎಂ. ಮುಜಾವರ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಅಧೀಕ್ಷಕರು ಮತ್ತು ಪರೀಕ್ಷೆಗಳಿಗೆ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ