ವಿವೇಕಾನಂದರು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು: ಖನಗಾಂವಿ
ಇಂಡಿ 24: ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲದೃಷ್ಠಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ ಎಂದು ದಿವಾಣಿ ನ್ಯಾಯಾಧೀಶರಾದ ಎ.ಎಚ್.ಖನಗಾಂವಿ ಹೇಳಿದರು.
ಭಾನುವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಇಂಡಿ, ವಕೀಲರ ಸಂಘ ಮತ್ತು ಮಹಿಳಾ ಮತ್ತುಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನ್ಯಾಯವಾದಿ ಎ.ಎಸ್.ಹಂಜಗಿ ಮಾತನಾಡಿ ಜನರ ಮನಸ್ಸಿನಲ್ಲಿ ಉಳಿಯಬೇಕಾದರೆ ನಾವು ಏನಾದರೂ ತ್ಯಾಗ ಮಾಡಬೇಕು. ಪ್ರಾಣ ತ್ಯಾಗವಲ್ಲ. ನಿಮ್ಮ ಸಮಯವನ್ನು ತ್ಯಾಗ ಮಾಡಿದರೆ ಸಾಕು. ವಿವೇಕಾನಂದರು ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದರು.
ಸಿಡಿಪಿಓ ಶ್ರೀಮತಿ ಎಸ್.ಡಿ.ಹಿರೇಮನಿ ಮಾತನಾಡಿ ಕಷ್ಟದಲ್ಲಿ ಇದ್ದ ಕುಟುಂಬದಿಂದ ಬಂದ ವಿವೇಕಾನಂದರು ಹಣ ಮಾಡಲಿಲ್ಲ. ತುಂಬಾ ಹಣ ಮಾಡಿ ಮಡಿದವರನ್ನು ಯಾರೂ ಇಂದು ನಾವು ನೆನೆಯುವದಿಲ್ಲ. ನಾವು ವಿವೇಕಾನಂದರನ್ನು ನೆನೆಸುತ್ತೇವೆಂದರೆ ಅವರು ಮಾಡಿದ ಸಮಾಜಕ್ಕೆ ತಮ್ಮ ಕೊಡುಗೆಗಳನ್ನು ನಾವು ನೆನೆಸಬೇಕಾಗಿದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಎಸ್.ಆರ್.ಬಿರಾದಾರ, ರಮೇಶ ಕುಲಕರ್ಣಿ, ಎಸ್.ಎಲ್.ನಿಂಬರಗಿಮಠ, ಅಶೋಕ ಗಜಾಕೋಶ, ಎಸ್.ಪಿ.ಪಾಟೀಲ, ಎಸ್.ಬಿ.ಬೂದಿಹಾಳ, ಐ.ಎಸ್. ಮಸಳಿ, ಬಿ.ಕೆ.ಮಸಳಿ, ಎಂ.ಎಸ್ ತೇಲಿ ವಕೀಲರು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.