ವರ್ಗಾವಣೆ: ಬಿ ಜೆ ಇಂಡಿಗೆ ಅದ್ದೂರಿ ಬೀಳ್ಕೊಡುಗೆ
ಇಂಡಿ 22: ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಸದಾ ಚಟುವಟಿಕೆಯಿಂದ ಕೂಡಿದ್ದು ಕಛೇರಿ ಎಲ್ಲಾ ಕಡತಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದ ಇಂಡಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಾಹಯಕ ನಿರ್ದೇಶಕ ಬಿ ಜೆ ಇಂಡಿಯವರದು ಅನನ್ಯ ವ್ಯಕ್ತಿತ್ವ. ಇಂಡಿ ತಾಲೂಕಿನಿಂದ ಬೇರೆಡೆಗೆ ವರ್ಗಾವಣೆಗೊಂಡ ಅವರನ್ನು ನಿನ್ನೆ ಇಂಡಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮೂರು ವರ್ಷ, ಎಂಟು ತಿಂಗಳ, 11 ದಿವಸ, ಇಂಡಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಈ ಸೇವಾ ಅವಧಿಯಲ್ಲಿ ನಾನು ನನ್ನ ಕರ್ತವ್ಯದ ಬಹುಪಾಲು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಾದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ, ಜನಾಂಗದ ಹೆಚ್ಚಿನ ಫಲಾನುಭವಿಗಳಿಗೆ, ಸಮಾಜ ಕಲ್ಯಾಣ ಇಲಾಖೆಯಿಂದ ನಿಗದಿಪಡಿಸಿದ ಯೋಜನೆಯಂತೆ, ಯೋಜನೆಗಳ ಸಹಾಯವನ್ನು ನೂರಕ್ಕೆ ನೂರರಷ್ಟು ತಲುಪಿಸುವ ಕಾರ್ಯ ಮಾಡಿರುತ್ತೇನೆ. ಈ ಒಂದು ಕಾರ್ಯದಲ್ಲಿ ನನ್ನ ಜೊತೆ ಕಾರ್ಯನಿರ್ವಹಿಸಿದ ವಾರ್ಡನ್, ಕಚೇರಿಯ ಅಧೀಕ್ಷಕರು, ಇನ್ನುಳಿದ ಸಿಬ್ಬಂದಿಗಳು ಮತ್ತು ಅತ್ಯಂತ ಮುಗ್ಧ ಮನಸ್ಸಿನ ಗ್ರೂಪ್ ಡಿ ಸಿಬ್ಬಂದಿಗಳು ಸಹಕರಿಸಿ ಮಾಡಿದ ಕಾರ್ಯಗಳು ನನ್ನ ಮನಸ್ಸಿಗೆ ಮತ್ತು ನನ್ನ ಕಾರ್ಯಕ್ಕೆ ತೃಪ್ತಿ ತಂದಿರುತ್ತವೆ. ಈ ಒಂದು ಸಿಬ್ಬಂದಿಗಳಿಗೆ ನಾನು ಅವರವರ ನೀರೀಕ್ಷೆಯಂತೆ ಯಾವುದೇ ಸಹಾಯ ಮಾಡದೇ ಇದ್ದಿರಬಹುದು. ಆದಾಗ್ಯೂ ಸಹ ವರ್ಗಾವಣೆ ಆದ ನನಗೆ ತುಂಬು ಮನಸ್ಸಿನಿಂದ ಹೃದಯಪೂರ್ವಕವಾಗಿ ನನ್ನ ಕುರಿತು ಒಳ್ಳೆಯ ಮಾತುಗಳನ್ನು ಹೇಳಿ, ಪ್ರೀತಿಯಿಂದ ಸತ್ಕರಿಸಿ ಬೀಳ್ಕೊಟ್ಟಿರುವುದಕ್ಕೆ, ಈ ನನ್ನೆಲ್ಲ ಗ್ರೂಪ್ ಡಿ ಸಿಬ್ಬಂದಿಗಳನ್ನು ಹಿಡಿದು, ಗ್ರೂಪ್ ಬಿ ಅಧಿಕಾರಿಯವರಿಗೆ ಪ್ರೀತಿಪೂರ್ವಕ ನಮನಗಳು ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಉಮೇಶ್ ಲಮಾಣಿ, ಕುಲಪ್ಪ ಕೋರೆ, ಪುಂಡಲಿಕ ಗೋಂದಳಿ, ಹನುಮಂತ ಅರವತ್ತು, ಅಶೋಕ ತಳವಾರ, ಸಂಗನಬಸ್ಸು ನಾಗಣಸೂರ್, ಸಾವಿತ್ರಿ ಬಿರಾದಾರ, ರವಿಚಂದ್ರ ಚೌವಾಣ್, ಜ್ಯೋತಿ ಅಹಿರಸಂಗ, ಶೈಲಾ ಬಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.