ಇಂಡಿ

ಕನ್ನಡ ಕಾವ್ಯದ ಶ್ರೀಮಂತಿಕೆ ಹಿರಿದಾಗಿದೆ: ಅಕ್ಕಿ

ಕನ್ನಡ ಕಾವ್ಯದ ಶ್ರೀಮಂತಿಕೆ ಹಿರಿದಾಗಿದೆ: ಅಕ್ಕಿ
ರಾಜ್ಯೋತ್ಸವದ ಸಂಭ್ರಮಾಚರಣೆ ನಿಮಿತ್ಯ ಹಮ್ಮಿಕೊಂಡ ಕವಿಗೋಷ್ಠಿಯನ್ನು ಸಾಹಿತಿ,ಸಂಶೋಧಕ ಡಿ.ಎನ್. ಅಕ್ಕಿ ಉದ್ಘಾಟಿಸಿದರು

ಇಂಡಿ: ಕನ್ನಡ ಕಾವ್ಯದ ಶ್ರೀಮಂತಿಕೆ ಹಿರಿದಾಗಿದೆ. ಕವಿರಾಜ ಮಾರ್ಗಕಾರನಿಂದ ಹಿಡಿದು ಇಂದಿನ ತನಕ ಕನ್ನಡ ಕಾವ್ಯ ಕೃಷಿ ನಿರಂತರವಾಗಿ ನಡೆದಿದೆ. ಕಾವ್ಯ ಪರಂಪರೆಗೆ ಜ್ಞಾನ ವಿಶಿಷ್ಠಕಲ್ಪನಾ ಶಕ್ತಿ ಮತ್ತು ಭಾವಸೂಕ್ಷ್ಮತೆಗಳು ಉತ್ತಮ ಕಾವ್ಯ ರಚನೆಗೆ ಅನಿವಾರ್ಯ ಮತ್ತು ಅತ್ಯವಶ್ಯಕವಾಗಿವೆ ಎಂದು ಸಾಹಿತಿ, ಸಂಶೋಧಕ ಡಿ.ಎನ್ ಅಕ್ಕಿ ಹೇಳಿದರು.

ಅವರು ಭಾನುವಾರ ಅಗರಖೇಡ ರಸ್ತೆಯ ಸರಕಾರಿ ಭವನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವಿಜಯಪೂರ, ತಾಲೂಕಾ ಶಾಖೆ, ಮಹಿಳಾ ಘಟಕ ಇಂಡಿ ವತಿಯಿಂದ ರಾಜ್ಯೋತ್ಸವದ ಸಂಭ್ರಮಾಚರಣೆ ನಿಮಿತ್ಯ ಹಮ್ಮಿಕೊಂಡ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕವಿಯಾದವರಿಗೆ ಸೂಕ್ಷ್ಮಗ್ರಹಿಕೆ, ವಿವಿಧ ಸನ್ನಿವೇಶ, ವಿಷಯಗಳನ್ನು ಆಳವಾಗಿ ಮನನ ಮಾಡಿಕೊಂಡು ಭಾವನೆಗಳನ್ನು ಹರಳು ಗಟ್ಟಿಸಿ ಭಾಷೆ ಮತ್ತು ಸರಳ ಶೈಲಿಯಲ್ಲಿ ಶಾಬ್ದಿಕ ಅಭಿವ್ಯಕ್ತಿಯನ್ನು ಪದ್ಯಗಳಲ್ಲಿ ಹಿಡಿದಿಡಬೇಕು ಎಂದರು.

ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಕೇವಲ ಕನರ್ಾಟಕ ರಾಜ್ಯೋತ್ಸವ ದಿನದಂದು ಕನ್ನಡದ ಭಾಷೆ, ಸಾಹಿತ್ಯೆ, ಸಂಸ್ಕೃತಿಯ ಬಗ್ಗೆ ಸ್ಮರಣೆ ಮಾಡಿದರೆ ಸಾಲದು ಪ್ರತಿಯೊಬ್ಬ ಕನ್ನಡಿಗರಲ್ಲಿ ಕನ್ನಡದ ಸ್ವಾಭಿಮಾನದ ಕಿಚ್ಚು ಇರಬೇಕು. ನಮ್ಮ ಸಮಾಜದಲ್ಲಿ ಸ್ತ್ರೀ ಪುರುಷ ಅಸಮಾನತೆ ಕಡಿಮೆಯಾಗಿಲ್ಲ.  ಮಹಿಳೆಯರು ಮಾಡುವ ಪ್ರತಿಯೊಂದು ಕೆಲಸ, ಕಾರ್ಯ ಚಟುವಟಿಕೆಗಳಿಗೆ ಪುರುಷರು ಹಿಂಜರಿಯುತ್ತಾರೆ. ಇದರಿಂದ ಮಹಿಳೆಯರಲ್ಲಿ ಆತಂಕ, ದುಗುಡ ಬರುತ್ತದೆ.  ಕೇವಲ ಆರಂಭ ಶೂರರಂತೆ ಹುರಿದುಂಬಿಸಿದರೆ ಸಾಲದು ಮುಂಬರುವ ದಿನಗಳಲ್ಲಿ ಸಾಹಿತ್ಯೆ ಕ್ಷೇತ್ರವನ್ನು ಎಲ್ಲರೂ ಸೇರಿ ಗಡಿನಾಡಿನಲ್ಲಿ ಮತ್ತಷ್ಟು ಗಟ್ಟಿಗೋಳಿಸೋಣ ಎಂದರು.    

ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಕಾಂತು ಇಂಡಿ ಮಾತನಾಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ವಿಜಯಪೂರ ತಾಲೂಕಾ ಶಾಖೆ ಮಹಿಳಾ ಘಟಕ  ಇಂಡಿ ರಾಜ್ಯೋತ್ಸವದ ಸಂಭ್ರಮಾಚರಣೆ ನಿಮಿತ್ಯ ಕವಿ ಗೋಷ್ಠಿ  ಮಾಡಿರುವ ಉದ್ದೇಶ  ಗ್ರಾಮೀಣ ಭಾಗದ ಮಹಿಳೆಯರಿಗೆ ಹಾಗೂ ಯುವಕವಿಗಳನ್ನು ಗುರುತಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿ ಗಡಿಭಾಗದಲ್ಲಿ ಉತ್ತೇಜಿಸುವ ಗುರಿಯಾಗಿದೆ. ಮಹಿಳೆಯರಿಂದ ಪ್ರಾರಂಭವಾದ ಸಾಹಿತ್ಯ ವೇದಿಕೆ ಮುಂಬರುವ ದಿನಗಳಲ್ಲಿ ವಿನೂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರು ಮತ್ತಷ್ಟು ಮುಖ್ಯವಾಹಿನಿಗೆ ಬರುವಂತೆ ಮಾಡಲಾಗುವುದು ಎಂದರು.

 ಪತ್ರಕರ್ತ ಶರಣಬಸಪ್ಪ ಕಾಂಬಳೆ ಮಾತನಾಡಿ, ಕನ್ನಡ ಭಾಷೆ ಉಳಿದೆಲ್ಲಾ ಭಾಷೆಗಳಿಗಿಂತ ಶ್ರೀಮಂತವಾಗಿದೆ. ಕನ್ನಡ ಭಾಷೆ ಬದುಕು ಮತ್ತು ಭಾವನೆಗಳಿಂದ ಕೂಡಿದೆ.  ನಾಗರಿಕತೆ ಬೆಳೆದಂತೆ ಸಂಸ್ಕೃತಿಯನ್ನು ಕಡೆಗಣಿಸುವುದು ಭಾಷೆಗೆ ಅಪಾಯಕಾರಿ. ಕನ್ನಡ ಭಾಷೆಯ ಸಂಸ್ಕೃತಿಯ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡರೆ ಕನ್ನಡಭಾಷೆ ವಿಶ್ವಜ್ಯೋತಿಯಾಗಿ ನಾಡು ಬೆಳಗುತ್ತದೆ ಎಂದರು.                              

ಮುಖ್ಯ ಅತಿಥಿ ರುಕ್ಮೀಣಿ ನಾಯ್ಕೋಡಿ,ಶಿಕ್ಷಕ ಹಾಗೂ ಸಾ.ಸಂ.ವೇದಿಕೆ ಉಪಾಧ್ಯಕ್ಷ ಜಿ.ಜಿ ಬರಡೋಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕವಿಗಳಾದ ಧಾನಮ್ಮಾ ಹಿರೇಮಠ, ಭವಾನಿ ಗುಳೇದಗುಡ್ಡ, ಸರೋಜನಿ ಮಾವಿನಮರ, ಜಯಶ್ರೀ ಅಳ್ಳಗಿ, ವಿಧ್ಯಾಶ್ರೀ ಕುಂಬಾರ,  ಬಸಮ್ಮಾ ಪೊಲೀಸಪಾಟೀಲ,  ರಿಯಾನಾ ಪಾಸ್ಟ್, ಬಿ.ಈ ಹಿರೇಮಠ ಕಾವ್ಯ ವಾಚನ ಮಾಡಿದರು.

ಶಿಕ್ಷಕ ಬಸವರಾಜ ಗೊರನಾಳ, ರಾಜು ಕುಲಕರ್ಣಿ , ಬಿ.ಈ. ಹಿರೇಮಠ, ಶಶಿಕಲಾ ಬೆಟಗೇರಿ, ಧಾನಮ್ಮಾ ಹಿರೇಮಠ, ರಾಜೇಶ್ವರಿ ಕ್ಷತ್ರಿ ಸೇರಿದಂತೆ ಅನೇಕ ಪದಾಧಿಕಾರಿಗಳು ಇದ್ದರು. 



ಸುದ್ದಿ ಓದಿ