ಲಾಭದಾಯಕ ಬೆಲೆಗೆ ನೇರ ಮಾರಾಟ ಮಾಡುವದು ರೈತ ಉತ್ಪಾದಕರ ಸಂಸ್ಥೆಗಳ ಉದ್ದೇಶ: ಅಲ್ಲಾಪುರ
ಇಂಡಿ: ಉತ್ಪನ್ನಗಳನ್ನು ಕ್ರೋಢಿಕರಿಸಿ, ಮೌಲ್ಯವರ್ಧನೆ ಮಾಡಿ, ಮಧ್ಯವರ್ತಿಗಳನ್ನು ತಪ್ಪಿಸಿ, ಲಾಭದಾಯಕ ಬೆಲೆಗೆ ನೇರ ಮಾರಾಟ ಮಾಡುವದು ರೈತ ಉತ್ಪಾದಕರ ಸಂಸ್ಥೆಗಳ ಉದ್ದೇಶ ಎಂದು ನಿಂಬೆ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.
ಅವರು ಶನಿವಾರ ಪಟ್ಟಣದ ತಾಲೂಕಾ ಆಡಳಿತ ಕಚೇರಿಯಲ್ಲಿರುವ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮುಖ್ಯ ಕಚೇರಿಯ ಸಬಾಭವನದಲ್ಲಿ ಮಾತನಾಡಿದರು.
ಜಲಾನಯನ ಇಲಾಖೆ ಬೆಂಗಳೂರು, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ಹಾಗೂ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹರನಾಳ ಸಹಯೋಗದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಉತ್ಪಾದಕರ ಉತ್ಕ್ರಷ್ಟಾ ಕೇಂದ್ರ ಬೆಂಗಳೂರದ ಅಶೋಕ ಆಲೂರ ಮಾತನಾಡಿ ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಘಟಿಸುವದು, ರೈತರ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿ ನೀಡುವುದು, ಆ ಪ್ರದೇಶದ ಪ್ರಮುಖ ಉತ್ಪನ್ನಗಳ ಆಧಾರದ ಮೇಲೆ ನಿರ್ಧಿಷ್ಟ ರೈತರ ಸಮೂಹವನ್ನು ಗುರುತಿಸುವದು. ತಾಂತ್ರಿಕ ಮಾಹಿತಿ ಮತ್ತು ಆದುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ಕೊಡುವದು ಉದ್ದೇಶವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕ್ರತಿಕ ಸಂಘ ಕಲಬುರಗಿಯ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಮತ್ತು ಅಶೋಕ ಆಲೂರರವರು ರೈತ ಉತ್ಪಾದಕರ ಸಂಸ್ಥೆಯಿಂದ ಸಿಗುವ ಲಾಭಗಳ ಕುರಿತು, ಸಂಸ್ಥೆಗಳ ರಚನೆಯ ಕುರಿತು, ಉದ್ದೇಶಗಳು, ಪಡೆಯಬಹುದಾದ ಸೌಲಭ್ಯಗಳ ಕುರಿತು, ಆಡಳಿತ ಮತ್ತು ನಿರ್ವಹಣೆ, ಸಂಸ್ಥೆಗಳ ಉತ್ಕೃಷ್ಟ ಕೇಂದ್ರಗಳ ಕುರಿತು ಮೂರು ಗಂಟೆಗಳ ಕಾಲ ಪ್ರೋಜೆಕ್ಟರ ಮೇಲೆ ತರಬೇತಿ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, ಮಹಾದೇವ ಅಂಬಲಿ, ಗುರಲಿಂಗಪ್ಪ ಯಲಗೋಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹತ್ತು ರೈತರ ಉತ್ಪಾದಕರ ಸಂಸ್ಥೆಗಳಿಗೆ ಕಿಟ್ಗಳನ್ನು ವಿತರಿಸಲಾಯಿತು.
ತರಬೇತಿಯಲ್ಲಿ ಶೈಲಜಾ ಸ್ಥಾವರಮಠ, ಶ್ರಿಮಂತ ದುದ್ದಗಿ, ಗಂಗಾರಾಮ ಪವಾರ, ಜಿ.ಎಸ್.ಬಂಕೂರ, ಶರಣು ತುಂಬಗಿ, ಡಿ.ಜಿ.ನಾರಾಯಣಕರ, ಬಾಳಪ್ಪಗೌಡ ಪಾಟೀಲ, ಗುರು ಕುಂಬಾರ, ಅಂಬಣ ಕವಟಗಿ, ಪರ್ವತಯ್ಯಾ ಸೇರಿದಂತೆ ಅನೇಕರು ಇದ್ದರು.