ಬಿಜೆಪಿಗೆ ಇಂಡಿ ಪುರಸಭೆ ಅಧಿಕಾರದ ಅದೃಷ್ಟ ಅನಾಯಾಸವಾಗಿ ಬಂದ ಭಾಗ್ಯ
ಕಾಂಗ್ರೆಸ್ನ ಅದೃಷ್ಟದ ನಾಗಾಲೋಟಕ್ಕೆ ಬ್ರೇಕ್* ಕಾಂಗ್ರೆಸ್ ಸೋತಿದೆ ಎನ್ನುವದಕ್ಕಿಂತ ಪ್ರಯತ್ನಿಸಿದ್ದರೆ ಅದೃಷ್ಟ ಒಲಿಯಬಹುದಿತ್ತೇನೋ?
ಇಂಡಿ: ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ನ ಅದೃಷ್ಟದ ನಾಗಾಲೋಟಕ್ಕೆ ಬ್ರೇಕ್ ಆಗಿ ಬಿಜೆಪಿಗೆ ಲಕ್ ಆಗಿದೆ. ಕಾಂಗ್ರೆಸ್ ಸೋತಿದೆ ಎನ್ನುವದಕ್ಕಿಂದ ಅದೃಷ್ಟ ಇವರಿಗೆ ಜಯಮಾಲೆ ಹಾಕಿಸಿಲ್ಲ. ಹಣೆಬರಹದಲ್ಲಿಯೇ ಇರದಿದ್ದರೆ ಯಾರು ಏನು ಮಾಡಿದರೂ ಪ್ರಯೋಜನವಿಲ್ಲ ಎಂಬ ಹಿರಿಯರ ಹೇಳಿಕೆ ಸತ್ಯವಾಗಿದೆ.
ಕಾಂಗ್ರೆಸ್ಗೆ ಬಹುಮತವಿರಲಿಲ್ಲ ಮತ್ತು ಯಾರೂ 2ಎ ಮಹಿಳೆ ಮೀಸಲಾತಿಗೆ ಆಯ್ಕೆಯಾಗಿರಲಿಲ್ಲ.
ಇಂಡಿ ಪುರಸಭೆಗೆ ಬಿಜೆಪಿ 11, ಕಾಂಗ್ರೆಸ್ 8, ಜೆಡಿಎಸ್2, ಮತ್ತು ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು. ಬಿಜೆಪಿಯಲ್ಲಿ ಬನ್ನೆಮ್ಮ ಹದರಿ, ರೇಣುಕಾ ಉಟಗಿ, ಭಾಗಿರಥಿ ಕುಂಬಾರ ಮತ್ತು ಜೆಡಿಎಸ್ ನಿಂದ ಶೈಲಜಾ ಪೂಜಾರಿ ಆಯ್ಕೆಯಾಗಿದ್ದರು. 23ಸದಸ್ಯರು ಹೊಂದಿದ ಪುರಸಭೆಗೆ 12 ಸದಸ್ಯರು ಬೆಂಬಲಿಸಿದರೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಆಯ್ಕೆ ಸುಗಮ. ಅವಶ್ಯವೆನಿಸಿದರೆ ಸಂಸದರು ಮತ್ತು ಶಾಸಕರು ಮತ ಚಲಾಯಿಸಬಹುದು.
ಮೊದಲ ಅವಧಿಗೆ ಕಾಂಗ್ರೆಸ್ನ 8, ಜೆಡಿಎಸ್2, ಪಕ್ಷೇತರರು 2 ಸದಸ್ಯರ ಮತ್ತು ಶಾಸಕರ ಮತ ಸೇರಿ 13 ಮತಗಳ ಬೆಂಬಲದೊಂದಿಗೆ ಜೆಡಿಎಸ್ನಿಂದ ಆಯ್ಕೆಯಾದ ಶೈಲಜಾ ಪೂಜಾರಿ ಇವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದ್ದರಿಂದ ಶೈಲಜಾ ಅಧ್ಯಕ್ಷೆಯಾಗಿ, ಪಕ್ಷೇತರ ಇಸ್ಮಾಯಿಲ್ ಅರಬ ಇವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಯಾದರು.
ಜ.20 ರಂದು ನಡೆದ ಚುನಾವಣೆಯಲ್ಲಿ ಎಲ್ಲರೂ ಮತಹಾಕಲು ಬಂದು ಹಾಜರಾತಿ ಬುಕ್ಕಿಗೆ 23ರಲ್ಲಿ 21 ಸದಸ್ಯರು ಮತ್ತು ಶಾಸಕರು, ಸಂಸದರು ಸಹಿ ಮಾಡಿದರು.ಆ ವೇಳೆ ಬಾಗಿಲು ಹಾಕಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದವರು ಚುನಾವಣೆ ಬಹಿಷ್ಕಾರ ಮಾಡಿ ಹೊರನಡೆದರು. ಆದರೆ ಹಾಜರಾತಿಗೆ ಸಹಿ ಮಾಡಿದ್ದರಿಂದ ಕೊರಂಗೆ ಭರ್ತಿ ಇದೆ ಎಂದೆ ಅರ್ಥ. ಹೀಗಾಗಿ ಇದ್ದ ಬಿಜೆಪಿ 9, ಪಕ್ಷೇತರರು 2 ಮತ್ತು ಸಂಸದ ಮತ ಸೇರಿ 12 ಮತ ಬೆಂಬಲವಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಬ್ಬ ಸದಸ್ಯರು ಹಾಜರಿಲ್ಲಿಲ್ಲ. ಹೀಗಾಗಿ ಕೊರಂಗೆ ಸಹಿ ಮಾಡಿದ 23 ಸದಸ್ಯರಲ್ಲಿ ಬಿಜೆಪಿ 12 ಮತಗಳು ಬಯಸದೇ ಬಂದ ಭಾಗ್ಯವಾಯಿತು. ಒಂದು ವೇಳೆ ಕಾಂಗ್ರೆಸ್ ನವರು ಚುನಾವಣೆ ಬಹಿಷ್ಕರಿಸದಿದ್ದರೂ ಕಾಂಗ್ರೆಸ್ ಮೂಲ 7, ಜೆಡಿನಿಂದ ವಲಸೆ 2, ಬಿಜೆಪಿಯಿಂದ ಬಂದು ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಾಗಿರಥಿ ಕುಂಬಾರ ಮತ್ತು ಶಾಸಕರ ಬೆಂಬಲ ಸೇರಿ 11 ಮತಗಳು ಬರುತ್ತಿದ್ದವು. ಕಾಂಗ್ರೆಸ್ನ ಅನುಸುಯಾ ಮಲ್ಲಿಕಾರ್ಜುನ ಕಾಲೇಭಾಗ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ಅವರು ಭಾಗವಹಿಸಿದ್ದರೆ ಸಮಬಲವಾದರೂ ಆಗುತ್ತಿತ್ತು. ಆಗ ಮತ್ತೊಮ್ಮೆ ಅದೃಷ್ಟಕ್ಕೆ ನಾಣ್ಯ ಹಾರಿಸುವದೋ, ಅಥವಾ ಚೀಟಿ ಎತ್ತುವದೋ ಆಗುತ್ತಿತ್ತು. ಅದಲ್ಲದೆ ಪಕ್ಷೇತರರು ಇಬ್ಬರು ಮುಸ್ಲಿಂ ಸಮುದಾಯವದರು. ಅವರಿಗೆ ಸಮಾಧಾನ ಪಡಿಸಿ ಬೆಂಬಲ ಪಡೆಯಬಹುದಿತ್ತು. ಆದರೆ ಅದೃಷ್ಟ ಬಿಜೆಪಿಗೆ ಒಲಿದು ಬಯಸದೇ ಬಂದ ಭಾಗ್ಯವಾಯಿತು.