ಕಾರ್ಮಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧ
ಲೋಕದರ್ಶನ ವರದಿ
ಕಂಪ್ಲಿ 25: ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿ, ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ತಾಯಿ ಹೃದಯವನ್ನು ಸರ್ಕಾರ ಹೊಂದಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ಸಕ್ಕರೆ ಕಾರ್ಖಾನೆಯ ಕೋದಂಡರಾಮ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಜಿಲ್ಲಾ ಮತ್ತು ಕಂಪ್ಲಿ ತಾಲೂಕು ಘಟಕದಿಂದ ಮತ್ತು ಕೆ.ಎಸ್.ಆಸ್ಪತ್ರೆ ಕೊಪ್ಪಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 1ನೇ ವಾರ್ಷಿಕೋತ್ಸವ ನಿಮಿತ್ಯದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಬಡತನದ ಕಾರ್ಮಿಕರ ವರ್ಗವಾಗಿದೆ.
ಕಾರ್ಮಿಕ ವರ್ಗಕ್ಕೆ ಸೌಲಭ್ಯಗಳನ್ನು ಮತ್ತು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಅಧಿಕಾರ ಮತ್ತೊಂದ ಶಾಶ್ವತವಲ್ಲ. ಇರುವ ದಿನದಲ್ಲಿ ಮಾಡುವ ಸೇವಾ ಕಾರ್ಯಗಳು ನಿರಂತರವಾಗಿ ಉಳಿಯಲು ಸಾಧ್ಯ. ಹೀಗಾಗಿ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಈಡೇರಿಸಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ, ಸಮಾಜದ ಬದಲಾವಣೆ ಸಾಧ್ಯ. ಸರ್ಕಾರದ ಯೋಜನೆಗಳ ಸದ್ಭಳಕೆಯೊಂದಿಗೆ ಆರ್ಥಿಕವಾಗಿ ಕಾರ್ಮಿಕರು ಅಭಿವೃದ್ಧಿ ಹೊಂದಬೇಕು.
ದುಶ್ವಟಗಳಿಂದ ದೂರವಿದ್ದು, ಒಳ್ಳೆಯ ಬದುಕು ಕಟ್ಟಿಕೊಳ್ಳುಲು ಮುಂದಾಗಬೇಕು ಎಂದರು. ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವುಕುಮಾರಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಕೆಲಸವಾಗಬೇಕು. ಸರ್ಕಾರಿ ನಿವೇಶನ ನೀಡಿದರೆ, ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಮತ್ತು ಕಾರ್ಮಿಕರ ಬಹು ಬೇಡಿಕೆಗಳಿಗೆ ಮುಕ್ತಿ ನೀಡಬೇಕು ಎಂದರು. ನಂತರ ಕೊಪ್ಪಳ ಕೆ.ಎಸ್.ಆಸ್ಪತ್ರೆಯ ಡಾ.ಮಂಜುನಾಥ ಅವರ ಸಮ್ಮುಖದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆಯಲ್ಲಿ ಕಾರ್ಮಿಕರು ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಗುಲ್ಬರ್ಗ ವಿದ್ಯುತ್ಚ್ಛಕ್ತಿ ಸರಬರಾಜು ಕಂಪನಿ(ಜೆಸ್ಕಾಂ) ನಿರ್ದೆಶಕ ಕೆ.ಷಣ್ಮುಖಪ್ಪ, ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಗ್ರಾಪಂ ಮಾಜಿ ಸದಸ್ಯ ತಿಮ್ಮಪ್ಪ, ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ, ಗಂಗಾವತಿ ಅಧ್ಯಕ್ಷ ಹನುಮಂತಪ್ಪ ಡಣಾಪುರ, ಗೌರವ ಸಲಹೆಗಾರ ಸೋಮಣ್ಣ ಶ್ರೇಷ್ಠಿ, ಮುಖಂಡರಾದ ನೆಣಕಿ ಗೀರೀಶ, ಹರೀಶ, ಸುರೇಶ, ಬಿ.ರಾಜಶೇಖರ ಸೇರಿದಂತೆ ಅನೇಕರಿದ್ದರು.