ಕಂಪ್ಲಿ

ರೋಗಿಗಳಿಗೆ, ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ

ರೋಗಿಗಳಿಗೆ, ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ

ಲೋಕದರ್ಶನ ವರದಿ 

              ಕಂಪ್ಲಿ  25: ಪಟ್ಟಣದ ಕೊಟ್ಟಾಲ್ ರಸ್ತೆಯ ತಹಶೀಲ್ದಾರ್ ಕಛೇರಿ ಎದುರುಗಡೆಯಲ್ಲಿರುವ ಸಮಗ್ರ ಸಾಮಾಜಿಕ ಮತ್ತು ನೈತಿಕ ಅಭಿವೃದ್ಧಿ (ಸ್ಮೈಲ್) ಸಂಸ್ಥೆಯ ಕಂಪಲಿರಾಯ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯ ಮಕ್ಕಳಿಗೆ ಮತ್ತು ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಬುಧವಾರ ವಿತರಿಸುವ ಮೂಲಕ 'ಸೇವಾ ದಿನ'ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ನಂತರ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನಾಡು ಕಂಡ ಅಪರೂಪದ ಶ್ರೇಷ್ಠ ವ್ಯಕ್ತಿಯಾಗಿದ್ದು, ತಮ್ಮ ದೂರದೃಷ್ಟಿ, ನಡೆ-ನುಡಿ ಹಾಗೂ ನಿರಂತರ ಸಮಾಜಮುಖಿ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು..

                ತಾಲೂಕು ಯೋಜನಾಧಿಕಾರಿ ಎಲ್‌.ರಾಘವೇಂದ್ರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳವು ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಅನ್ನದಾನ ಮತ್ತು ಧಾರ್ಮಿಕ ಕಾರ್ಯಗಳ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಮಾಜದ ಏಳಿಗೆಯೇ ಜೀವನದ ಗುರಿಯಾಗಿದೆ ಎಂದರು. ಸಮಗ್ರ ಸಾಮಾಜಿಕ ಮತ್ತು ನೈತಿಕ ಅಭಿವೃದ್ಧಿ (ಸ್ಮೈಲ್) ಸಂಸ್ಥೆಯ ಮುಖ್ಯಸ್ಥ ಉಮಾಪತಿಗೌಡ ಮಾತನಾಡಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಸೇವಾ ಪರಂಪರೆ ಸಾಗುತ್ತಿದೆ.

               ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಕೊಡುಗೆಯ ಮೂಲಕ ಲಕ್ಷಾಂತರ ಜನರ ಬದುಕಿಗೆ ಆಶಾಕಿರಣವಾಗಿದೆ. ಧರ್ಮಾಧಿಕಾರಿಗಳ ಜನ್ಮದಿನದ ಅಂಗವಾಗಿ ಆಸ್ಪತ್ರೆ, ಬುದ್ಧಿಮಾಂದ್ಯ ಶಾಲೆಯಲ್ಲಿ ಹಾಲು, ಹಣ್ಣು, ಬ್ರೆಡ್ ವಿತರಿಸಿ, ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಈ ಸಂದರ್ಭದಲ್ಲಿ ಜನ ಜಾಗೃತಿ ವೇದಿಕೆ ಸದಸ್ಯರಾದ ಡಾ.ವೆಂಕಟೇಶ ಸಿ.ಭರಮಕ್ಕನವರ್, ಉಮಾಮಹೇಶ್ವರಿ, ನಿವೃತ್ತ ಡಾ.ಜಗನ್ನಾಥ ಹಿರೇಮಠ, ಗೌರವ ಸಲಹೆಗಾರ ಡಾ.ಎ.ಸಿ.ದಾನಪ್ಪ, ಕೃಷಿ ಅಧಿಕಾರಿ ಸಂಜುಕುಮಾರ, ಮೇಲ್ವಿಚಾರಕ ಮಂಜುಳಾ, ಮಂಜುನಾಥ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ