ರಾಜ್ಯಮಟ್ಟದ ಎನ್ಎಸ್ಎಸ್ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಜಿ. ಎಚ್. ಕಾಲೇಜಿನ ಡಾ. ಶಮಂತ್ ಕುಮಾರ್ ಕೆ.ಎಸ್. ಆಯ್ಕೆ
ಲೋಕದರ್ಶನ ವರದಿ
ಹಾವೇರಿ 25: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಕೋಶದ ವತಿಯಿಂದ 2024ಹಿ25ನೇ ಸಾಲಿನಲ್ಲಿ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಶಮಂತ್ ಕುಮಾರ್ ಕೆ.ಎಸ್. ಅವರು ಆಯ್ಕೆಯಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕವು ರಾಜ್ಯಮಟ್ಟದ ಅತ್ಯುತ್ತಮ ಎನ್ಎಸ್ಎಸ್ ಘಟಕ ಪ್ರಶಸ್ತಿಗೂ ಆಯ್ಕೆಯಾಗಿದ್ದು, ಮಹಾವಿದ್ಯಾಲಯಕ್ಕೆ ಏಕಕಾಲದಲ್ಲಿ ಎರಡು ರಾಜ್ಯಮಟ್ಟದ ಪ್ರಶಸ್ತಿಗಳ ಗೌರವ ದೊರೆತಿದೆ.
ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೌರವಾನ್ವಿತ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸಮ್ಮುಖದಲ್ಲಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗುವುದು. ರಾಜ್ಯದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುವ ಈ ಗೌರವವು ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಮೂರು ವರ್ಷಗಳ ಸಮಾಜಮುಖಿ ಸೇವಾ ಕಾರ್ಯಗಳಿಗೆ ಮತ್ತಷ್ಟು ಮಹತ್ವ ತಂದುಕೊಟ್ಟಿದೆ. 2022-23, 2023-24 ಹಾಗೂ 2024-25ನೇ ಸಾಲಿನ ಮೂರು ವರ್ಷಗಳ ಎನ್ಎಸ್ಎಸ್ ಚಟುವಟಿಕೆಗಳು, ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ವಿದ್ಯಾರ್ಥಿಗಳ ನಾಯಕತ್ವ ವಿಕಸನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಸಂಘಟನೆಯ ಆಧಾರದ ಮೇಲೆ ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ ಶಾಲೆಗಳ ಉಳಿವಿನ ಆಶಯದೊಂದಿಗೆ ‘ಕನ್ನಡ ಶಾಲೆಗೆ ಬಣ್ಣ’ ಎಂಬ ವಿನೂತನ ಕಾರ್ಯಕ್ರಮದಡಿ ಐದು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು, ಎನ್ಎಸ್ಎಸ್ ಸ್ವಯಂಸೇವಕರಿಂದ ವರ್ಲಿ ಕಲೆಯನ್ನು ಮೂಡಿಸಿ ಶಾಲೆಗಳಿಗೆ ಹೊಸ ಮೆರುಗು ನೀಡಲಾಗಿದೆ. ಹಾವೇರಿ ನಗರದ ವಿವಿಧ ಪ್ರದೇಶಗಳಲ್ಲಿ ಬಾಲಕಾರ್ಮಿಕ ಪದ್ಧತಿ ಹಾಗೂ ಹೆಣ್ಣು ಭ್ರೂಣಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು ರಚಿಸಿ ಸಾಮಾಜಿಕ ಸಂದೇಶ ಸಾರಲಾಗಿದೆ. ವಿಶ್ವ ಆಹಾರ ದಿನದಂದು ಪ್ರತಿವರ್ಷ ಅನಾಥಾಶ್ರಮಗಳಿಗೆ ಆಹಾರ ವಿತರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಹಾನುಭೂತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವೂ ನಿರಂತರವಾಗಿ ನಡೆದಿದೆ.