ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯ
ಗದಗ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕಾ ಮಿಷನ್ (ವಿಬಿ ಜಿ ರಾಮ್ ಜಿ) ಯೋಜನೆಯಡಿ ಪ್ರತಿಯೊಬ್ಬ ಕೂಲಿಕಾರರಿಗೆ ದಿನಕ್ಕೆ 382 ರೂ. ಕೂಲಿ ಸಿಗಲಿದ್ದು, ಅಕುಶಲ ಕೂಲಿಕಾರರು ಸದುಪಯೋಗ ಪಡೆಯಬೇಕು ಎಂದು ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಕುಮಾರ ಪೂಜಾರ ಅವರು ತಿಳಿಸಿದರು. ಗದಗ ತಾಲೂಕಿನ ಅಂತೂರ ಗ್ರಾಮದಲ್ಲಿ ವಿಬಿಜಿ ರಾಮ್ ಜಿ ಯೋಜನೆಯ ಸಮುದಾಯ ಕಾಮಗಾರಿ ಪರೀಶೀಲಿಸಿ ಅವರು ಮಾತನಾಡಿದರು.
ವಿಬಿಜಿ ರಾಮ್ ಜಿ ಕಾಮಗಾರಿಗಳ ಹಾಜರಾತಿ ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಅಳವಡಿಸುವುದು ಕಡ್ಡಾಯವಾಗಿದೆ. ಪ್ರತಿದಿನ ಎರಡು ಸಾರಿ ತೆಗೆದುಕೊಳ್ಳಲಾಗುತ್ತದೆ. ಕಾಯಕ ಬಂಧುಗಳು ಮತ್ತು ಕೂಲಿಕಾರರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗವಂತೆ ತಿಳಿಸಿದರು. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ಮಾತ್ರ ಗರಿಷ್ಠ 382 ರೂ. ದಿನಗೂಲಿ ದೊರೆಯಲಿದೆ ಎಂದರು. ಗ್ರಾಮೀಣ ಪ್ರದೇಶದ ಬಡ ಅಕುಶಲಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ. ಕೆರೆ ಅಭಿವೃದ್ಧಿ ಕಾಮಗಾರಿಯಿಂದ ಅಂತರ್ಜಲ ಹೆಚ್ಚಳವಾಗಲಿದೆ ಎಂದರು. ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಯಾಗಿರುವ ವಿಬಿಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸ ನೀಡಲಾಗುತ್ತಿದೆ. ಪುರುಷ- ಮಹಿಳೆ ಎಂಬ ಭೇದವಿರದೆ ಎಲ್ಲರಿಗೂ ಸಮಾನ ಕೂಲಿ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಆಡಳಿತಾಧಿಕಾರಿ ಶಿವಕುಮಾರ ವಾಲಿ, ಬಿಎಫ್ಟಿ ದಾವಲ್ ಚಳ್ಳಮರದ, ಅಶೋಕ ಜಿನಗಿ, ಮಂಜುನಾಥ ಹೊಂಬಳಮಠ, ಮಾಂತೇಶ ಮಜ್ಜಿಗುಡ್ಡ ಕಾಯಕ ಬಂಧುಗಳು, ಕೂಲಿಕಾರರು ಇದ್ದರು.