ಗದಗ

ವಸತಿ ವಿನ್ಯಾಸ, ಉದ್ಯಾನವನ, ಪ್ರಾಧಿಕಾರ ಕಚೇರಿ ನಿರ್ಮಾಣಕ್ಕೆ ಚಾಲನೆ

ವಸತಿ ವಿನ್ಯಾಸ, ಉದ್ಯಾನವನ, ಪ್ರಾಧಿಕಾರ ಕಚೇರಿ ನಿರ್ಮಾಣಕ್ಕೆ ಚಾಲನೆ

             ಗದಗ 25:  ಗದಗ-ಬೆಟಗೇರಿ ನಗರವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ, ಸುಂದರ ಹಾಗೂ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು. '

            ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬುಧವಾರ ನಗರದ ಕಬಾಡರ ಲೇಓಟ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂದಾಜು 27 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಜನರಿಗೆ ಒದಗಿಸುವ ಯೋಜನೆ ಉತ್ತಮ ಕಾರ್ಯವಾಗಿದೆ.

              ದೇಶದಲ್ಲಿ ನಗರೀಕರಣದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೆ ಶೇ.13ರಷ್ಟಿದ್ದ ನಗರವಾಸಿಗಳ ಪ್ರಮಾಣ ಇಂದು ಶೇ.39ಕ್ಕೆ ಏರಿಕೆಯಾಗಿದೆ. ಇದರಿಂದ ನಗರಗಳಲ್ಲಿ ಜನಸಂಖ್ಯೆಯ ಒತ್ತಡ ಹೆಚ್ಚಾಗಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳ ಅಗತ್ಯವೂ ಹೆಚ್ಚಾಗಿದೆ. ಹೀಗಾಗಿ ವ್ಯವಸ್ಥಿತ ನಗರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.ವಿಶ್ವದಲ್ಲಿಯೇ ಅತಿ ಹೆಚ್ಚು ಜನರು ಬಂದು ನೆಲೆಸುತ್ತಿರುವ ನಗರಗಳಲ್ಲಿ ಬೆಂಗಳೂರು ಪ್ರಮುಖವಾಗಿದೆ.  

                ಪ್ರಸ್ತುತ ಸುಮಾರು 1.40 ಕೋಟಿ ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, 1.30 ಕೋಟಿ ವಾಹನಗಳಿವೆ. ಇಷ್ಟೊಂದು ಜನಸಂಖ್ಯೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ದೊಡ್ಡ ಸವಾಲಾಗಿದೆ. ನಗರಗಳ ಬೆಳವಣಿಗೆಗೆ ಅನುಗುಣವಾಗಿ ಯೋಜಿತ ಅಭಿವೃದ್ಧಿ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಶಾಸಕ ಎಚ್‌.ಕೆ. ಪಾಟೀಲ ಅವರು ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜನನಾಯಕರಾಗಿದ್ದು, ಅವರ ದೂರದೃಷ್ಟಿಯ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಅಗತ್ಯವಾಗಿವೆ.

            ಸಹಕಾರಿ ಬೀಷ್ಮ ದಿವಂಗತ ಕೆ.ಎಚ್‌. ಪಾಟೀಲ ಅವರು ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅವರೊಂದಿಗೆ ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ ಎಂದು ಸ್ಮರಿಸಿದರು.ಜಿಲ್ಲೆಯಲ್ಲಿ ಪ್ರಸ್ತುತ ಬರಗಾಲದ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಹಾಗೂ ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ.  


ಸುದ್ದಿ ಓದಿ