ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ: ಗಡದೆ
ಇಂಡಿ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕ ರಾಜ್ಯ ಏಕೀಕರಣದ ಸಂದರ್ಭದಲ್ಲಿ ವಿವಿಧ ಪ್ರಾಂತಗಳಲ್ಲಿ ಚದುರಿಹೋಗಿದ್ದ ಕನ್ನಡಿಗರು ತೋರಿದ ಸಹಮತ ಮತ್ತು ಸಹಬಾಳ್ವೆಯಿಂದ ನೂತನ ಕರ್ನಾಟಕ ರಾಜ್ಯ ರೂಪುಗೊಂಡಿದೆ. ಜಾತಿ, ಧರ್ಮ, ಬೇಧ, ಭಾವಗಳನ್ನು ಬಿಟ್ಟು ಕರ್ನಾಟಕ ರಾಜ್ಯದ ಪ್ರಗತಿಗೆ ಎಲ್ಲರೂ ಶ್ರಮಿಸೋಣ ಎಂದು ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.
ಮಂಗಳವಾರ ಪಟ್ಟಣದ ಪೊಲೀಸ್ ಪರೇಡ ಮೈದಾನದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಮನೆತನಗಳ ಅಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ರಾಜ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ ಉದಯಗೊಂಡದ್ದು, ನವೆಂಬರ್ 1, 1956 ರಲ್ಲಿ, ಮುಂದೆ ದೇವರಾಜ ಅರಸ್ ಅವರ ಆಳ್ವಿಕೆಯ ಕಾಲದಲ್ಲಿ 1973 ರ ನವೆಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು ಎಂದರು.
ನಮ್ಮ ನಾಡು, ಆಲೂರು ವೆಂಕಟರಾವ್, ಬಿ.ಎಂ. ಶ್ರೀಕಂಠಯ್ಯನವರು, ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಕಾರ್ನಾಡ್ ಸೇರಿದಂತೆ ಮುಂತಾದ ಸಹಸ್ರಾರು ಕನ್ನಡಿಗರ ಒತ್ತಾಸೆಯಿಂದ ನಮ್ಮ ನಾಡು, ರಚಿತವಾಗಲು ಸಾಧ್ಯವಯಿತು ಎಂದ ಅವರು ಈ ನಾಡು ನುಡಿಯ ಉಳಿವಿಗೆ ಮತ್ತು ಬೆಳವಣಿಗೆಗೆ ನಾವೆಲ್ಲ ಶ್ರಮಿಸೊಣ ಎಂದರು.
ಉಪನ್ಯಾಸಕ ಎ.ಎಸ್. ಗಾಣೀಗೇರ್ ಮಾತನಾಡಿ, ಕನ್ನಡದ ಎಲ್ಲ ಜನ ಕನ್ನಡದ ಉಳಿವು ಬೆಳವಣಿಗೆಗಾಗಿ ಒಂದಾಗುವುದು ತೀರ ಅಗತ್ಯವಾಗಿದೆ. ನಮ್ಮ ನಾಡು ನುಡಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕನ್ನಡ ಉಳಿಸಿ ಬೆಳೆಸುವುದು ಸರ್ಕಾರದ ಪ್ರತಿಯೊಂದು ಹಂತದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದು. ಕನ್ನಡ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದು. ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಗುರುತಿಸಿ ಗೌರವಿಸುವುದು. ಸಿನೆಮಾ, ಮನೋರಂಜನೆ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಂದಾಗಿ ಕೆಲಸವನ್ನು ಮಾಡೋಣ ಎಂದರು.
ತದ ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಕನ್ನಡ-ನಾಡು ನುಡಿಯ ಗೀತೆಗಳ ನೃತ್ಯ ಜರುಗಿತು. ವೀರಭಾರತಿ ಪ್ರಾಥಮಿಕ ಶಾಲೆಯ ಮಕ್ಕಳು ಹುಟ್ಟಿದರೆ ಕನ್ನಡೆ ನಾಡಲ್ಲಿ ಹುಟ್ಟಬೇಕು ಹಾಡಿನಲ್ಲಿ ಕನ್ನಡದ ಖ್ಯಾತನಟ ದಿ. ಪುನೀತ್ ರಾಜ್ಕುಮಾರ ಅವರ ಭಾವಚಿತ್ರ ಪ್ರದರ್ಶಿಸಿ ಗೌರವ ಸಲ್ಲಿಸಿದರು.
ಕನ್ನಡ ನಾಡಿನ ವಿವಿಧ ಹೋರಾಟಗಾರರ ಛದ್ಮವೇಶ ಧರಿಸಿ ವಿದ್ಯಾರ್ಥಿಗಳು ಗಮನ ಸೆಳೆದರು.
ಪ್ರಾಥಮಿಕ, ಪ್ರೌಢ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪುರಸಭೆ ಅಧ್ಯೆಕ್ಷೆ ಬನ್ನಮ್ಮ ಹದರಿ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ತಹಸೀಲ್ದಾರ ನಾಗಯ್ಯ ಹಿರೇಮಠ, ಇಓ ಸುನೀಲ ಮದ್ದಿನ್, ಬಿಇಓ ವಸಂತ ರಾಠೋಡ ಇದ್ದರು.
ಕಾರ್ಯಕ್ರಮವನ್ನು ತಹಸೀಲ್ದಾರ ನಾಗಯ್ಯ ಹಿರೇಮಠ ಸ್ವಾಗತಿಸಿ, ಡಿ.ಎ. ಮುಜಗೊಂಡ ನಿರೂಪಿಸಿ, ದಶರಥ ಕೋರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಕೆ. ಕೊಪ್ಪಾ, ಸಂಗೀತಾ ಕುಲಕರ್ಣಿ, ಆರ್.ವಿ. ಪಾಟೀಲ, ಬಿ.ಜೆ. ಇಂಡಿ, ಮಹದೇವಪ್ಪ ಏವೂರ, ಆರ್.ಟಿ. ಹಿರೇಮಠ, ದಯಾನಂದ ಮಠ, ದುಂಡು ಮುಜಗೊಂಡ, ಸಿಪಿಐ ಭೀಮನಗೌಡ ಬಿರಾದಾರ, ಗ್ರಾಮಾಂತರ ಪಿಎಸ್ಐ ಅಶೋಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡಿಗಾಗಿ ಹೋರಾಟ ನಡೆಸಿದ್ದ ಅಥರ್ಗಾದ 95 ವರ್ಷದ ಹಿರಿಯ ಜೀವಿ ಮಲ್ಲಿಕಾರ್ಜುನ ಬಿರಾದಾರ ಮತ್ತು ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡನ್ನು ಪ್ರತಿಶತ 100 ರಷ್ಟು ಲಿಂಕ್ ಮಾಡಿದ ಶಿಕ್ಷಣ ಇಲಾಖೆಯ 13 ಬಿಎಲ್ಓ ಗಳು ಹಾಗೂ ವಿವಿಧಸಾಧಕರಿಗೆ ಸನ್ಮಾನಿಸಲಾಯಿತು.