ವಿದ್ಯಾರ್ಥಿಗಳಿಗೆ ವಿಜ್ಞಾನಿಗಳ ಜೀವನ, ಸಾಧನೆ ಬಗ್ಗೆ ತಿಳಿಸಿರಿ: ಕಾಮಗೊಂಡ
ಇಂಡಿ: ವಿದ್ಯಾರ್ಥಿಗಳಿಗೆ ವಿಜ್ಞಾನಿಗಳ ಜೀವನ, ಸಾಧನೆ ತಿಳಿಸಿದರೆ ಭವಿಷ್ಯದಲ್ಲಿ ವೈಜ್ಞಾನಿಕ ಮನೋಭಾವದ ಜತೆಗೆ ಸಂಶೋಧನಾ ಪ್ರವೃತ್ತಿ ಹೆಚ್ಚುತ್ತದೆ ಎಂದು ಸಿವಿ ರಾಮನ್ ಸಂಸ್ಥೆಯ ಸಂಸ್ಥಾಪಕ ಶಿವಾನಂದ ಕಾಮಗೊಂಡ ಹೇಳಿದರು.
ಸೋಮವಾರ ಪಟ್ಟಣದ ಸಿಂದಗಿ ರಸ್ತೆಯ ಸಿವಿ ರಾಮನ್ ಪದವಿ ಮಹಾ ವಿದ್ಯಾಲಯದಲ್ಲಿ ಸಿವಿ ರಾಮನ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಶೋಧನಾ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳದ್ದೇ ಮೇಲುಗೈ, ಇದು ನಿಜಕ್ಕೂ ಹೆಮ್ಮೆಯ ಸಂಗತಿ. ವಿಜ್ಞಾನಕ್ಕೆ ಸಿ.ವಿ. ರಾಮನ್ರ ಒಂದು ದೊಡ್ಡ ಕೊಡುಗೆಯಾಗಿದೆ. ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು. ನೀಲಿ ಬಣ್ಣಗಳ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ. ಸಮುದ್ರದ ಸುತ್ತಲು ತಿರುಗಾಡಿದರು. ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮಹಾವೀರ್ ವರ್ಧಮಾನ್, ಕಾರ್ಯದರ್ಶಿ ಶೈಲೇಶ್ ಬಿಳಗಿ, ಸನ್ಮತಿ ಹಳ್ಳಿ, ಪ್ರಾಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.