ಕ್ರೀಡೆಗಳು ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕ ಡಾ. ಗುಹೇಶ್ವರ ಪಾಟೀಲ
ಲೋಕದರ್ಶನ ವರದಿ
ಹಾವೇರಿ 27: ಕ್ರೀಡೆಗಳು ಕೇವಲ ಸೋಲು-ಗೆಲುವುಗಳಿಗೆ ಸೀಮಿತವಾಗಿರದೆ, ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾಗಿವೆ. ಅವು ಜೀವನದುದ್ದಕ್ಕೂ ಅಗತ್ಯವಾಗಿರುವ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದು ಹಾವೇರಿಯ ಸಿಂಧಗಿ ಶ್ರೀ ಶಾಂತವೀರೇಶ್ವರ ಆಯುರ್ವೇದ ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಗುಹೇಶ್ವರ ಪಾಟೀಲ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಜಿ.ಎಚ್. ಕಾಲೇಜಿನಲ್ಲಿ ಹಾವೇರಿ ವಿಶ್ವವಿದ್ಯಾಲಯ ಹಾಗೂ ಜಿ.ಎಚ್. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೊ. ಕೆ. ಆರ್. ಕೋಣ್ತಿ ಮಾತನಾಡಿ, ಕ್ರೀಡೆಗಳು ಆರೋಗ್ಯಕರ ಮನಸ್ಸನ್ನು ರೂಪಿಸುವುದರೊಂದಿಗೆ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತವೆ ಎಂದರು. ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಸಿ. ಎನ್. ಸೊರಟೂರ ಮಾತನಾಡಿ, ಕ್ರೀಡೆಗಳು ಶಿಸ್ತು, ಆತ್ಮವಿಶ್ವಾಸ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಡಾ. ಸಂಜೀವ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ವಾಲಿಬಾಲ್ ವೇಗ, ಚುರುಕುತನ, ದೈಹಿಕ ಸಾಮರ್ಥ್ಯ, ಕ್ಷಣಾರ್ಧದಲ್ಲಿ ನಿರ್ಧಾರ ಕೈಗೊಳ್ಳುವ ಕೌಶಲ ಹಾಗೂ ಆಟಗಾರರ ನಡುವಿನ ಸಮನ್ವಯವನ್ನು ಬೆಳೆಸುವ ಮಹತ್ವದ ಕ್ರೀಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್. ಎಲ್. ಬಾಲೇಹೊಸೂರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಸಿದ್ಧೇಶ್ ಎಂ. ಬಿ. ಸ್ವಾಗತಿಸಿದರು. ಪ್ರೊ. ಶ್ರೀದೇವಿ ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಈ. ಬಿ. ಸೇಡಂಕರ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ ಚೂರಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಜೆ. ಎಸ್. ಅರಣಿ, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಪ್ರೊ. ಎಂ. ಎಂ. ಹೊಳ್ಳಿಯವರ, ಡಾ. ಆತ್ಮಾನಂದ ಹೊಳೆಯಣ್ಣವರ, ಪ್ರೊ. ಹೇಮಂತ ಸಿ. ಎನ್., ಪ್ರೊ. ಎಸ್. ಸಿ. ನೀರಲಗಿ ಸೇರಿದಂತೆ ಗಣ್ಯರು, ಉಪನ್ಯಾಸಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.