ಹಾವೇರಿ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ: ಶಾಂತಿಯುತ ಮತದಾನ- ಅ.27 ರಂದು ಮತ ಎಣಿಕೆ: ಡಾ.ವಿಜಯಮಹಾಂತೇಶ ದಾನಮ್ಮನವರ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ:     ಶಾಂತಿಯುತ ಮತದಾನ- ಅ.27 ರಂದು ಮತ ಎಣಿಕೆ:  ಡಾ.ವಿಜಯಮಹಾಂತೇಶ ದಾನಮ್ಮನವರ
Election for the Karnataka West Graduates' Constituency: Peaceful polling; vote counting on Oct 27

ಹಾವೇರಿ 23: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ಬಿ ದಾನಮ್ಮನವರ ಅವರು ಮಾಹಿತಿ ನೀಡಿದ್ದಾರೆ.ಜಿಲ್ಲೆಯ  ಹಾವೇರಿ, ಬ್ಯಾಡಗಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯನ್ನು ಪರೀಶೀಲಿಸಿದ ಅವರು,  ಮತದಾನ ಅತ್ಯಂತ ಸುವ್ಯವಸ್ಥಿತವಾಗಿ ಜರುಗಿದೆ ಎಂದು ತಿಳಿಸಿದ್ದಾರೆ. 

ಸುತ್ತುವಾರು ಮತದಾನ ವಿವರ: ಬೆಳಿಗ್ಗೆ 8 ರಿಂದ  ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ  ಶೇ.28.37 , ಮಧ್ಯಾಹ್ನ 12 ರಿಂದ ಸಂಜೆ 2 ಗಂಟೆವರೆಗೆ  ಶೇ.53.06 ರಷ್ಟು , ಮಧ್ಯಾಹ್ನ 2  ರಿಂದ ಸಂಜೆ 4 ಗಂಟೆಗೆ ವೇಳೆಗೆ ಶೇ.75.81 ರಷ್ಟು  ಮತದಾನವಾಗಿದ್ದು, ಸತತ ಏರಿಕೆ ಕ್ರಮದಲ್ಲಿ ಮತದಾನದ ಪ್ರಗತಿ ಕಂಡುಬಂದಿತು.  

ಮತದಾನಕ್ಕೆ ಮೋಡದ ಆಸರೆ: ಸದಾ ಉರಿಬಿಸಿಲಿನಿಂದ ಬಸವಳಿದ ಜನತೆಗೆ ಮತದಾನದ ದಿನ ಪ್ರಕೃತಿಯ ಆಶೀರ್ವಾದ ಎಂಬಂತೆ  ಜಿಲ್ಲೆಯ ವಿವಿಧೆಡೆ ಮೋಡ ಕವಿದ ತಂಪಾದ ವಾತಾವರಣ ಜನರನ್ನು ಮತಗಟ್ಟೆಗೆ ಸೆಳೆಯಲು ಪೂರಕವಾಗಿತ್ತು. ಬೆಳಗಿನ ಅವಧಿಯಲ್ಲಿ ಕೆಲ ಮತಗಟ್ಟೆಗಳಲ್ಲಿ ತುಸು ಮಂದಗತಿ ಮತದಾನ ಕಂಡುಬಂದರೂ ಕೆಲವೆಡೆ ಚುರುಕಿನ ಮತದಾನ ದೃಶ್ಯ ಕಂಡುಬಂದಿತು. ಮಧ್ಯಾಹ್ನ ಶಿಗ್ಗಾಂವ, ಹಾವೇರಿ ಸೇರಿದಂತೆ ಹಲವೆಡೆ ಮಳೆರಾಯನ ಆಗಮನವಾಯಿತು.  

ಹಾವೇರಿ, ಶಿಗ್ಗಾಂವ, ರಾಣೇಬೆನ್ನೂರು,  ಸೇರಿದಂತೆ ಜಿಲ್ಲೆಯ ಎಲ್ಲ ಮತಗಟ್ಟೆಯಲ್ಲಿ ಪದವೀುಧರರು ಸರತಿ ಸಾಲಿನಲ್ಲಿ ನಿಂತು  ಮತದಾನಮಾಡಲು ನಿಂತ ದೃಶ್ಯ ಕಂಡುಬಂದಿತು.  

ಅಕ್ಟೋಬರ್ 27 ರಂದು ಮತ ಎಣಿಕೆ :ದಿನಾಂಕ 27-10-2026 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ಜರುಗಲಿದೆ. 


ಸುದ್ದಿ ಓದಿ